ನ್ಯೂಸ್ ನಾಟೌಟ್ : ಇಡೀ ಚಿತ್ರಲೋಕವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ್ದ ಘಟನೆ ಕೇರಳದಲ್ಲಿ ನಡೆದಿತ್ತು.ಖ್ಯಾತ ನಟಿ ಅಪರ್ಣಾ ನಾಯರ್ ದುರಂತ ಅಂತ್ಯ ಯಾಕಾಯಿತು? ಎಂಬುದಕ್ಕೆ ಹಲವು ಅನುಮಾನಗಳನ್ನು ಜನ ವ್ಯಕ್ತ ಪಡಿಸಿದ್ದರು. ಮಲಯಾಳಂ ಮನರಂಜನಾ ಲೋಕಕ್ಕಂತು ಸಹಿಸಿಕೊಳ್ಳಲಾಗದ ನೋವು ಕಾಡಿತ್ತು.ಇದೀಗ ಅವರ ಈ ಕೃತ್ಯಕ್ಕೆ ಕಾರಣ ತಿಳಿದು ಬಂದಿದೆ.ಕೌಟುಂಬಿಕ ಸಮಸ್ಯೆಯೇ ಕಾರಣ ಎನ್ನಲಾಗುತ್ತಿದೆ.
ನಟಿ ಸಹೋದರಿ ಅಸಲಿ ಕಾರಣವನ್ನು ಬಿಚ್ಚಿಡುತ್ತಾ ಸ್ಪೋಟಕ ವಿಷಯದ ಬಗ್ಗೆ ತೆರೆದಿಟ್ಟಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಗಂಡನ ಕುಡಿದ ಚಟವೇ ನಟಿಯ ದುರಂತ ಅಂತ್ಯಕ್ಕೆ ಕಾರಣ ಎಂದು ಹೇಳಲಾಗಿದೆ. ಕುಟುಂಬದಲ್ಲಿದ್ದ ಅನೇಕ ಸಮಸ್ಯೆಗಳ ಜತೆಗೆ ಗಂಡನಿಂದ ನಿರ್ಲಕ್ಷ್ಯಕ್ಕೆ ಒಳಗಾಗಬಹುದು ಎಂಬ ಚಿಂತೆಯು ಸಹ ಅಪರ್ಣಾರನ್ನು ತುಂಬಾ ಕಾಡಿತ್ತು.ಈ ಎಲ್ಲ ಹೇಳಿಕೆಗಳನ್ನು ಅಪರ್ಣಾ ಸಹೋದರಿ ನೀಡಿದ್ದು, ಅದರ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಈ ಕೃತ್ಯವೆಸಗುವ ಕೆಲವೇ ಗಂಟೆಗಳಿಗೂ ಮುನ್ನ ಅಪರ್ಣಾ, ತನ್ನ ತಾಯಿಯೊಂದಿಗೆ ಮಾತನಾಡಿದ್ದರು ಎಂದು ಹೇಳಲಾಗುತ್ತಿದೆ. ವಿಡಿಯೋ ಕಾಲ್ ಮಾಡಿ ಮಾತನಾಡುತ್ತಾ ಕುಟುಂಬದಲ್ಲಿನ ಸಮಸ್ಯೆಗಳ ಬಗ್ಗೆಯೂ ಮಾತನಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.ಗಂಡನ ಕುಡಿತದ ಚಟದಿಂದ ಮಾನಸಿಕ ತೊಂದರೆಗೆ ಒಳಗಾಗಿರುವುದನ್ನು ತಾಯಿಯೊಂದಿಗೆ ಹಂಚಿಕೊಂಡಿದ್ದರೆಂದು ಹೇಳಲಾಗಿದೆ. ಆದಷ್ಟು ಬೇಗ ಈ ಸ್ಥಳವನ್ನು ತೊರೆಯುತ್ತೇನೆ ಎಂದು ಹೇಳಿದ್ದ ಅವರು ಫೋನ್ನಲ್ಲಿ ಮಾತನಾಡುವಾಗ ಅಪರ್ಣಾ ಅಳುತ್ತಿದ್ದಳು ಎಂದು ನಟಿ ತಾಯಿ ಮಾಹಿತಿ ನೀಡಿದ್ದಾರೆ.
ಕೇರಳದ ಕರಮಾನದ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಗತಕಾರಿಣಿಯಾಗಿಯೂ ಕೆಲಸ ಮಾಡಿಕೊಂಡಿದ್ದ ಅಪರ್ಣಾ ಅವರು ಎರಡು ವಾರಗಳ ಹಿಂದೆಯಷ್ಟೇ ರಾಜೀನಾಮೆ ನೀಡಿದ್ದರು ಎನ್ನಲಾಗಿದೆ. ಆ.31ರಂದು ರಾತ್ರಿ 7.30ರ ಸುಮಾರಿಗೆ ಬಾರದ ಲೋಕಕ್ಕೆ ಅಪರ್ಣಾ ತೆರಳಿದ್ದರು. ಅವರನ್ನು ಕರಮಾನ ಕಿಲ್ಲಿಪಾಲಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು.
ಇದಾದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿದರು. ಇದೀಗ ಅಪರ್ಣಾ ಅವರ ಈ ನಿರ್ಧಾರಕ್ಕೆ ಗಂಡನ ಕುಡಿತದ ಚಟ ಮತ್ತು ಕೌಟುಂಬಿಕ ಸಮಸ್ಯೆಗಳೇ ಕಾರಣ ಎಂಬುದು ಬಯಲಾಗಿದೆ.ಅಪರ್ಣಾ ಅವರು ಮೇಘತೀರ್ಥಂ, ಮುದ್ದುಗೌವ್, ಅಚಾಯನ್ಸ್, ಕೊಡತಿ ಸಮಕ್ಷಮ್ ಬಾಲನ್ ವಕೀಲ್ ಹಾಗೂ ಕಲ್ಕಿ ಮುಂತಾದ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಚಂದನಮಜ ಮತ್ತು ಆತ್ಮಸಖಿಯಂತಹ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅಪರ್ಣಾಗೆ ತ್ರಯಾ ಮತ್ತು ಕೃತಿಕಾ ಎಂಬ ಹೆಸರಿನ ಮುದ್ದಾದ ಹೆಣ್ಣು ಮಕ್ಕಳಿದ್ದಾರೆ.