ನ್ಯೂಸ್ ನಾಟೌಟ್ : ಬದ್ಧವೈರಿ ರಾಷ್ಟ್ರಗಳಾಗಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಏಕದಿನ ಹೈವೋಲ್ಟೆಜ್ ಪಂದ್ಯಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಇಂದು (ಶನಿವಾರ, ಜು2) ಮಧ್ಯಾಹ್ನ 3 ಗಂಟೆಗೆ ರೋಚಕ ಫೈಟ್ ನಡೆಯಲಿದೆ. ಇದೀಗ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಹಬ್ಬವೋ ಹಬ್ಬ. ಅಕ್ಟೋಬರ್ನಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಪೂರ್ವಾಭ್ಯಾಸದ ವೇದಿಕೆಯಾಗಿರುವ ಏಷ್ಯಾ ಕಪ್ ಟೂರ್ನಿ ಉಭಯ ತಂಡಗಳಿಗೆ ದೊಡ್ಡ ಅವಕಾಶವನ್ನು ತೆರೆದಿಟ್ಟಿದೆ. ಎ ಗುಂಪಿನಲ್ಲಿರುವ ಈ ತಂಡಗಳು ಇದೇ ಟೂರ್ನಿಯಲ್ಲಿ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಭಾರತ ಇಂದು ತನ್ನ ಮೊದಲ ಪಂದ್ಯವನ್ನು ಆಡುತ್ತಿದ್ದರೆ ಪಾಕಿಸ್ತಾನ ಈಗಾಗಲೇ ನೇಪಾಳ ವಿರುದ್ಧ ಗೆದ್ದು ಗೆಲುವಿನ ಖಾತೆ ತೆರೆದುಕೊಂಡಿದೆ.
ಕಿಂಗ್ ಕೊಹ್ಲಿ ಅಪ್ರತಿಮ ಆಟಗಾರ, ಎಗ್ರೆಸ್ಸಿವ್ ಸ್ವಭಾವದ ಕೊಹ್ಲಿ ಕ್ರೀಸ್ ಗೆ ಅಂಟಿ ನಿಂತು ಕೊಂಡರೆಂದರೆ ಎದುರಾಳಿಗಳೆಲ್ಲ ಉಡೀಸ್, ಕೊಹ್ಲಿ ಬ್ಯಾಟಿಂಗ್ ನಲ್ಲಿ ಅಷ್ಟೊಂದು ಪವರ್ ಇದೆ. ಈ ಈ ಹಿಂದಿನ ಹಲವು ಪಂದ್ಯಗಳು ಅದಕ್ಕೆ ಸಾಕ್ಷಿಯಾಗಿದೆ. ಕಳೆದ ಟಿ20 ವಿಶ್ವಕಪ್ ಟೂರ್ನಿಯು ಆಸ್ಟ್ರೇಲಿಯಾದಲ್ಲಿ ನಡೆದಾಗ ಪಾಕ್ ತಂಡಕ್ಕೆ ಭಾರತವು ಸೋಲಿನ ಕಹಿಯುಣಿಸಿತ್ತು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಅಬ್ಬರಕ್ಕೆ ಪಾಕ್ ತಂಡದ ಘಟಾನುಘಟಿ ಬೌಲರ್ಗಳು ಸುಸ್ತಾಗಿ ಹೋಗಿದ್ದರು. ಉತ್ತಮ ಲಯದಲ್ಲಿರುವ ವಿರಾಟ್ ಅವರನ್ನು ಕಟ್ಟಿಹಾಕುವುದೇ ಈಗಲೂ ಆ ಬೌಲರ್ಗಳಿಗೆ ಸವಾಲಾಗಲಿದೆ.
ಶಾಹೀನ್ ಆಫ್ರಿದಿ, ನಸೀಂ ಶಹಾ ಮತ್ತು ಹ್ಯಾರಿಸ್ ರವೂಫ್ ಅವರು ತಮ್ಮ ಬೌಲಿಂಗ್ನಲ್ಲಿ ಹೊಸ ತಂತ್ರಗಾರಿಕೆ ಅನುಸರಿಸುವುದು ಅನಿವಾರ್ಯವಾಗಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಇದು ಪ್ರತಿಷ್ಠೆಯ ಟೂರ್ನಿ ಆಗಿದೆ. ಏಷ್ಯಾ ಕಪ್ ಗೆದ್ದರೆ ಅವರ ಮತ್ತು ತಂಡದ ಆತ್ಮವಿಶ್ವಾಸವು ಹೆಚ್ಚಲಿದೆ. ಅದರಿಂದ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ತಂಡದ ಸಾಮರ್ಥ್ಯ ಹೆಚ್ಚಬಹುದು. ಸುಮಾರು ಒಂದು ದಶಕದಿಂದ ಭಾರತ ತಂಡವು ಐಸಿಸಿ ಟ್ರೋಫಿ ಗೆಲುವಿನ ಬರ ಅನುಭವಿಸುತ್ತಿದೆ. ಅದನ್ನು ನೀಗಿಸಲು ಈಗ ಗೆಲುವೊಂದೇ ದಾರಿ
ಯುವ ಬ್ಯಾಟ್ಸ್ ಮನ್ ಶುಭಮನ್ ಗಿಲ್, ತಿಲಕ್ ವರ್ಮಾ, ’ಮಿಸ್ಟರ್ 360 ಡಿಗ್ರಿ‘ ಖ್ಯಾತಿಯ ಸೂರ್ಯಕುಮಾರ್ ಯಾದವ್ ಅವರಿಗೆ ತಮ್ಮ ಛಾಪು ಮೂಡಿಸಲು ಇದು ಸಕಾಲ. ಕೆ.ಎಲ್. ರಾಹುಲ್ ಗೈರು ಹಾಜರಿಯಲ್ಲಿ ಶ್ರೇಯಸ್ ಅಯ್ಯರ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ವಿಕೆಟ್ ಕೀಪಿಂಗ್ ಹೊಣೆಯು ಇಶಾನ್ ಕಿಶನ್ ಅವರಿಗೆ ಲಭಿಸಬಹುದು.
ಪಾಕ್ ತಂಡದ ನಾಯಕ ಮತ್ತು ಉತ್ತಮ ಲಯದಲ್ಲಿರುವ ಬ್ಯಾಟ್ಸ್ ಮನ್ ಬಾಬರ್ ಆಜಂ, ಮೊಹಮ್ಮದ್ ರಿಜ್ವಾನ್, ಇಫ್ತಿಕಾರ್ ಅಹಮದ್ ಜಮಾನ್ ಅವರನ್ನು ನಿಯಂತ್ರಿಸುವ ಹೊಣೆ ಈ ಮೂವರು ವೇಗಿಗಳ ಮೇಲಿದೆ. ರವೀಂದ್ರ ಜಡೇಜ ಅವರೊಂದಿಗೆ ಕುಲದೀಪ್ ಯಾದವ್ ಸ್ಪಿನ್ ವಿಭಾಗವನ್ನು ನಿರ್ವಹಿಸುವ ಸಾಧ್ಯತೆ ಇದೆ. ಇದೇ ಟೂರ್ನಿಯ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಪಾಕ್ ತಂಡವು ಗೆದ್ದಿತ್ತು. ಬಾಬರ್ ಮತ್ತು ಇಫ್ತಿಕಾರ್ ಅದರಲ್ಲಿ ಶತಕ ಬಾರಿಸಿದ್ದರು.
ಸುಮಾರು ಒಂದು ವರ್ಷದ ನಂತರ ಏಕದಿನ ಕ್ರಿಕೆಟ್ ಮಾದರಿಗೆ ಮರಳುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಗಾಯದಿಂದಾಗಿ ಕ್ರಿಕೆಟ್ನಿಂದ ದೂರವುಳಿದಿದ್ದ ಅವರು ಈಚೆಗೆ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ್ದರು. ಫಿಟ್ ಕೂಡ ಆಗಿದ್ದಾರೆ. ಏಷ್ಯಾ ಕಪ್ ಟೂರ್ನಿಯಲ್ಲಿ ಅವರು ಉತ್ತಮವಾಗಿ ಆಡಿ ವಿಶ್ವಕಪ್ ಟೂರ್ನಿಗೆ ಫಿಟ್ ಆಗಿ ಉಳಿಯುವರು ಎಂಬ ಭರವಸೆ ತಂಡದಲ್ಲಿದೆ. ಅವರೊಂದಿಗೆ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಬೌಲಿಂಗ್ ಹೊಣೆ ನಿಭಾಯಿಸಲಿದ್ದಾರೆ.
ವೇಗ-ಸ್ಪಿನ್ ಎರಡಕ್ಕೂ ನೆರವಾಗುವ ಪಿಚ್, ಬೌಲರ್ ಸ್ನೇಹಿ ಪಿಚ್ ನಲ್ಲಿ ಬ್ಯಾಟ್ಸ್ ಮನ್ ಗಳಿಗೆ ದೊಡ್ಡ ಸವಾಲಾಗುವ ಸಾಧ್ಯತೆ ಇದೆ. ಪಂದ್ಯಕ್ಕೆ ಮಳೆ ಅಡಚಣೆ ಎದುರಾಗಬಹುದು.
ಭಾರತ: ರೋಹಿತ್ ಶರ್ಮಾ (ನಾಯಕ) ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್ ಕೆ.ಎಲ್. ರಾಹುಲ್ ಶುಭಮನ್ ಗಿಲ್ ಸೂರ್ಯಕುಮಾರ್ ಯಾದವ್ ತಿಲಕ್ ವರ್ಮಾ ಇಶಾನ್ ಕಿಶನ್ ಹಾರ್ದಿಕ್ ಪಾಂಡ್ಯ (ಉಪನಾಯಕ) ರವೀಂದ್ರ ಜಡೇಜ ಅಕ್ಷರ್ ಪಟೇಲ್ ಶಾರ್ದೂಲ್ ಠಾಕೂರ್ ಜಸ್ಪ್ರೀತ್ ಬುಮ್ರಾ ಮೊಹಮ್ಮದ್ ಶಮಿ ಮೊಹಮ್ಮದ್ ಸಿರಾಜ್ ಕುಲದೀಪ್ ಯಾದವ್ ಪ್ರಸಿದ್ಧ ಕೃಷ್ಣ ಸಂಜು ಸ್ಯಾಮ್ಸನ್ (ಮೀಸಲು ಆಟಗಾರ)
ಪಾಕಿಸ್ತಾನ: ಬಾಬರ್ ಆಜಂ (ನಾಯಕ) ಅಬ್ದುಲ್ಲಾ ಶಫೀಕ್ ಫಖಾರ್ ಜಮಾನ್ ಇಮಾಮ್ ಉಲ್ ಹಕ್ ಸಲ್ಮಾನ್ ಅಲಿ ಆಘಾ ಇಫ್ರಿಕಾರ್ ಅಹಮದ್ ಮೊಹಮ್ಮದ್ ರಿಜ್ವಾನ್ ಮೊಹಮ್ಮದ್ ಹ್ಯಾರಿಸ್ ಶಾದಾಬ್ ಖಾನ್ ಮೊಹಮ್ಮದ್ ನವಾಜ್ ಉಸಾಮ ಮೀರ್ ಫಾಹೀಂ ಅಶ್ರಫ್ ಹ್ಯಾರಿಸ್ ರವೂಫ್ ಮೊಹಮ್ಮದ್ ವಾಸೀಂ ಜೂನಿಯರ್ ನಸೀಂ ಶಹಾ ಶಾಹೀನ್ ಆಫ್ರಿದಿ ಸಾದ್ ಶಕೀಲ್ ತಯ್ಯಬ್ ತಾಹೀರ್ (ಮೀಸಲು ಆಟಗಾರ)
ಪಂದ್ಯ ಆರಂಭ: ಮಧ್ಯಾಹ್ನ 3
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ ನೆಟ್ವರ್ಕ್