ನ್ಯೂಸ್ ನಾಟೌಟ್: ಹಾಸನ ಸಂಸದ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಸಂಸದ ಸ್ಥಾನದಿಂದ ಅನರ್ಹವಾಗಿದ್ದೇ ಈಗ ದೊಡ್ಡ ಸುದ್ದಿಯಾಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ಒದಗಿಸಿದ್ದ ಆರೋಪಗಳು ಈಗ ಪ್ರಜ್ವಲ್ ರೇವಣ್ಣ ಸುತ್ತ ಸುತ್ತುತ್ತಿದೆ. ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಷ್ಟಕ್ಕೂ ರಾಜ್ಯದ ಜೆಡಿಎಸ್ ನ ಏಕೈಕ ಸಂಸದ ಅನರ್ಹಗೊಂಡಿದ್ದು ಹೇಗೆ ಅನ್ನುವ ವಿಚಾರವನ್ನು ನೋಡುವುದಾದರೆ ಹಲವಾರು ಕಾರಣಗಳು ಕಂಡು ಬರುತ್ತದೆ. ಆ ಕಾರಣಗಳ ಪಟ್ಟಿಯನ್ನು ನಾವು ಇಲ್ಲಿ ನೀಡಿದ್ದೇವೆ. ಸಂಕ್ಷಿಪ್ತವಾಗಿ ಓದಿ.
ಪ್ರಜ್ವಲ್ ಸಂಸದ ಸ್ಥಾನ ಅನರ್ಹಕ್ಕೆ ಕಾರಣಗಳು
ಪ್ರಜ್ವಲ್ ರೇವಣ್ಣ ಅವರು ಮೆಸರ್ಸ್ ಅಧಿಕಾರ್ ವೆಂಚರ್ಸ್ ಎಲ್ಎಲ್ಪಿ ಹಾಗೂ ದ್ರೋಣ ವರ್ಕ್ ಫೋರ್ಸ್ ಎಲ್ಎಲ್ಪಿ ಸಂಸ್ಥೆಗಳಲ್ಲಿನ ಪಾಲುದಾರಿಕೆ ಮತ್ತು ಮಾಲಿಕತ್ವದ ವಿವರಗಳನ್ನು ಬಹಿರಂಗಪಡಿಸಿಲ್ಲ. ತಂದೆ ಎಚ್.ಡಿ. ರೇವಣ್ಣ ಅವರಿಂದ ದೊಡ್ಡ ಮೊತ್ತದ ಅಂದರೆ ₹ 1.26 ಕೋಟಿ ಸಾಲ ಪಡೆದಿರುವುದಾಗಿ ಪ್ರಜ್ವಲ್ ಹೇಳಿದ್ದಾರೆ. ಆದರೆ, ಎಚ್.ಡಿ.ರೇವಣ್ಣ ಲೋಕಾಯುಕ್ತಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಮಗನಿಗೆ ₹ 47.36 ಲಕ್ಷ ಸಾಲ ಕೊಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
ಚುನಾವಣೆಗೆ ಸ್ಪರ್ಧಿಸುವಾಗ ಅಂದಿನ ದಿನಕ್ಕೆ ಅನು ಗುಣವಾಗಿ ಕಳೆದ 5 ವರ್ಷಗಳ ಆದಾಯ ತೆರಿಗೆ ಪಾವತಿಯ ಮಾಹಿತಿ ಸಲ್ಲಿಸಬೇಕು. ಆದರೆ, ಪ್ರಜ್ವಲ್ ರೇವಣ್ಣ 2008ರಿಂದ 2018ರ ಅವಧಿಯಲ್ಲಿ ದೊಡ್ಡ ಮೊತ್ತದ ಆದಾಯ ಮತ್ತು ಆಸ್ತಿ ಸಂಪಾದಿಸಿದ್ದರೂ 2018-19ನೇ ಸಾಲಿನ ಆದಾಯ ತೆರಿಗೆ ಮಾಹಿತಿ ಮಾತ್ರ ಒದಗಿಸಿದ್ದಾರೆ. ಸ್ಥಿರ ಮತ್ತು ಚರಾಸ್ತಿಗಳ ಕುರಿತು ಅಸಮರ್ಪಕ ಮಾಹಿತಿ ನೀಡಿದ್ದು, ಅನೇಕ ಅಂಶಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಪ್ರಮಾಣ ಪತ್ರದಲ್ಲಿ ಮರೆ ಮಾಚಲಾಗಿದೆ.
ಪ್ರಜ್ವಲ್ ರೇವಣ್ಣ ತಮ್ಮ ವ್ಯಾಪಾರದ ಆದಾಯ ₹ 7.48 ಲಕ್ಷ ಎಂದು ಘೋಷಿಸಿಕೊಂಡಿದ್ದಾರೆ. ಆದರೆ, ಆದಾಯದ ಮೂಲ ಯಾವುದು ಎಂಬುದನ್ನು ಬಹಿರಂಗಪಡಿಸಿಲ್ಲ. 2019ರ ಮಾರ್ಚ್ 22ಕ್ಕೆ ಅನ್ವಯವಾಗುವಂತೆ ಬ್ಯಾಂಕ್ ಬ್ಯಾಲೆನ್ಸ್ ₹5.78 ಲಕ್ಷ ಎಂದು ಪ್ರಮಾಣ ಪತ್ರದಲ್ಲಿ ತೋರಿಸಲಾಗಿತ್ತು. ಆದರೆ, ವಾಸ್ತವದಲ್ಲಿ ಅದು ₹ 49.09 ಲಕ್ಷ ಆಗಿತ್ತು. ರಾಜ್ಯಸಭಾ ಸದಸ್ಯರಾಗಿದ್ದ ಕುಪೇಂದ್ರ ರೆಡ್ಡಿ ಅವರಿಂದ ಪಡೆದುಕೊಂಡಿದ್ದ ₹ 50 ಲಕ್ಷದ ಮಾಹಿತಿಯನ್ನೂ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿಲ್ಲ. ಈ ಏಳು ಕಾರಣಗಳನ್ನು ಉಲ್ಲಂಘಿಸಿರುವುದು ಈಗ ಪ್ರಜ್ವಲ್ ರೇವಣ್ಣ ಸಂಸದ ಸ್ಥಾನದಿಂದ ಅನರ್ಹಗೊಳ್ಳುವುದಕ್ಕೆ ಪ್ರಮುಖ ಕಾರಣವಾಗಿದೆ.
ಲೋಕಸಭೆಗೆ 2019ರ ಏಪ್ರಿಲ್ 18ರಂದು ಚುನಾವಣೆ ನಡೆದು, ಮೇ 23ರಂದು ಫಲಿತಾಂಶ ಪ್ರಕಟವಾಗಿತ್ತು. ಪ್ರಜ್ವಲ್ ರೇವಣ್ಣ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ಎ.ಮಂಜು ಎರಡನೇ ಸ್ಥಾನ ಗಳಿಸಿದ್ದರು. ‘ಪ್ರಜ್ವಲ್ ರೇವಣ್ಣ ಚುನಾವಣೆಯಲ್ಲಿ ಅಕ್ರಮಗಳನ್ನು ನಡೆಸಿ ಜಯಗಳಿಸಿದ್ದಾರೆ. ಹೀಗಾಗಿ, ಅವರ ಲೋಕಸಭೆ ಸದಸ್ಯತ್ವವನ್ನು ಅನೂರ್ಜಿತಗೊಳಿಸಬೇಕು’ ಎಂದು ಕೋರಿ ಪರಾಜಿತ ಅಭ್ಯರ್ಥಿ ಎ.ಮಂಜು ಮತ್ತು ಕಾಂಗ್ರೆಸ್ ಮುಖಂಡರಾಗಿದ್ದ, ನಂತರ ಬಿಜೆಪಿಗೆ ಸೇರಿದ್ದ ಜಿ.ದೇವರಾಜೇ ಗೌಡ 2019ರಲ್ಲಿ ಪ್ರತ್ಯೇಕ ಚುನಾವಣಾ ತಕರಾರು ಅರ್ಜಿಗಳನ್ನು ಸಲ್ಲಿಸಿದ್ದರು.