ನ್ಯೂಸ್ ನಾಟೌಟ್: ವಿದ್ಯೆ ಕಲಿಸುವ ಗುರುಗಳು ದೇವರಿಗೆ ಸಮಾನ ಅನ್ನುತ್ತೇವೆ. ಅಂತಹ ಗುರುಗಳನ್ನು ಸ್ಮರಿಸುವ ಶಿಕ್ಷಕರ ದಿನಾಚರಣೆಯನ್ನು ಸೆ.5 ರಂದು ಸುಳ್ಯದಲ್ಲಿ ಅದ್ದೂರಿಯಾಗಿ ಆಚರಿಸುವುದಕ್ಕೆ ನಿರ್ಧರಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಈ. ರಮೇಶ್, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸುಳ್ಯದ ಪರಿವಾರಕಾನ ಅಮರಜ್ಯೋತಿ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆಯಲಿದೆ ಎಂದು ತಿಳಿಸಿದರು. ಈ ಬಗ್ಗೆ ಮಾತನಾಡಿದ ಅವರು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ದ.ಕ. ಶಿಕ್ಷಕರ ಕಲ್ಯಾಣ ನಿಧಿ, ಬೆಂಗಳೂರು ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಮಂಗಳೂರು, ಸುಳ್ಯ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾರಂಭದಲ್ಲಿ ಜಿಲ್ಲೆಯ 21 ಶಿಕ್ಷಕರಿಗೆ ಉತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿ, ತಾಲೂಕು ನಿವೃತ್ತ ಶಿಕ್ಷಕ/ಶಿಕ್ಷಕೇತರ ನೌಕರರಿಗೆ ಸನ್ಮಾನ, ತಾಲೂಕು ಸ್ಕಟ್/ ಗೈಡ್ಸ್ ವಿಭಾಗದ ಉತ್ತಮ ಶಿಕ್ಷಕರಿಗೆ ಅಭಿನಂದನೆ, ಶೈಕ್ಷಣಿಕ ಸಾಧಕರಿಗೆ ಹಾಗೂ ಸಂಸ್ಥೆಗಳಿಗೆ ಸನ್ಮಾನ ನಡೆಯಲಿದೆ. ವಿಧಾನ ಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ವಿಶೇಷ ಆಹ್ವಾನಿತರಾಗಿ ಸಭೆಗೆ ಆಗಮಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ , ಶಾಸಕಿ ಭಾಗೀರಥಿ ಮುರುಳ್ಯ, ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ. ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗ ಪ್ರಾಧ್ಯಾಪಕ ಡಾ.ವಿಶ್ವನಾಥ ಬದಿಕಾನ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದು ಬಿ.ಈ. ರಮೇಶ್ ತಿಳಿಸಿದರು.
ಸಭೆ ಮತ್ತು ಸನ್ಮಾನದ ಬಳಿಕ ಶಿಕ್ಷಕರ ಯಕ್ಷಗಾನ ಒಕ್ಕೂಟ ಸುಳ್ಯ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ, ಶಿಕ್ಷಣ ಸಂಯೋಜಕಿ ನಳಿನಿ ಉಪಸ್ಥಿತರಿದ್ದರು.