ನ್ಯೂಸ್ ನಾಟೌಟ್ :ಕೊಡಗಿನಲ್ಲಿ ಕೆಲವೆಡೆ ಜನರು ಆಕಾಶದತ್ತ ನೋಡಿ, ಸೂರ್ಯನತ್ತ ದೃಷ್ಟಿಸಿ ಫೋಟೋ ತೆಗೆದು ಸಂಭ್ರಮ ಪಟ್ಟರು. ಇದಕ್ಕೆ ಕಾರಣವೆಂದರೆ, ಸೂರ್ಯನ ಸುತ್ತ ವಿಶೇಷವಾಗಿ ಕಾಣಿಸಿಕೊಂಡಿರುವ ಹೊಳೆಯುವ ಉಂಗುರ..!
ಹೌದು,ಆಕಾಶ ವೀಕ್ಷಣೆಯ ಹವ್ಯಾಸವುಳ್ಳವರಿಗೆ, ಫೋನ್ ಫೋಟೋಗ್ರಫಿಯ ಆಸಕ್ತರಿಗೆ ಹಬ್ಬವೆಂಬಂತೆ ಕಂಡುಬಂದ ಈ ವಿಸ್ಮಯ ಕಂಡು ಪುಳಕಿತರಾದರು.ಸೂರ್ಯ ದೇವ’ನ ಸಪ್ತ ವರ್ಣಗಳ ಉಂಗುರ ದರ್ಶನದಿಂದ ಆಕರ್ಷಿತರಾದರು. ತಮ್ಮ ತಮ್ಮ ಮನೆಗಳ ತಾರಸಿ ಮೇಲೆ ಹೋಗಿ ಸೂರ್ಯನ ಹೊಸ ‘ಅವತಾರ’ವನ್ನು ನೋಡಿ ಸಂಭ್ರಮಿಸಿದರು.
ಈ ಅಪರೂಪದ ವಿದ್ಯಮಾನವು ಕೊಡಗು ಜಿಲ್ಲೆಯಲ್ಲಾಗಿದೆ.ಸೂರ್ಯನ ಸುತ್ತ ಆಕರ್ಷಕ ಬಳೆಯ ರೀತಿ ಗೋಚರವಾಗಿದೆ.ಶುಕ್ರವಾರ ಮೂರು ಬಣ್ಣಗಳ ಬೃಹತ್ ಉಂಗುರದ ಮಾದರಿ ಪೊನ್ನಂಪೇಟೆ ತಾಲೂಕಿನ ಕೆಲವೆಡೆ ಕಾಣಿಸಿದ್ದು, ವಿಶೇಷವೆಂಬಂತಿತ್ತು.
ಬೆಳಕಿನ ವಕ್ರೀಭವನ ಮತ್ತು ಮೋಡದಲ್ಲಿನ ನೀರಿನ ಕಣಗಳಿಂದ ಉಂಗುರದ ರೀತಿ ಸೃಷ್ಟಿಯಾಗಿದೆ ಎಂದು ಹೇಳಲಾಗಿದೆ.ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಟಿ. ಶೆಟ್ಟಿಗೇರಿ ಮತ್ತು ಶ್ರೀಮಂಗಲ ವ್ಯಾಪ್ತಿಯಲ್ಲಿ ಸೂರ್ಯನ ಸುತ್ತ ಉಂಗುರದ ಸ್ವರೂಪದಲ್ಲಿ ಕಾಣಿಸಿದೆ ಎಂದು ವರದಿಯಾಗಿದೆ.