ನ್ಯೂಸ್ ನಾಟೌಟ್: ಸೌಜನ್ಯ ಹತ್ಯೆ ಪ್ರಕರಣದ ಬಳಿಕ ಪಾಂಗಾಳ ರಸ್ತೆಯಲ್ಲಿ ಕೊನೆಗೂ ಸರ್ಕಾರ ಬಸ್ ಸಂಚಾರ ಮಾಡುವ ನಿರ್ಧಾರವನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಹೊಸ ಬಸ್ ಓಡಾಟಕ್ಕೆ ಶುಕ್ರವಾರ ಚಾಲನೆ ನೀಡಿದೆ.
ಬೆಳಗ್ಗೆ 8:15 ಕ್ಕೆ ಧರ್ಮಸ್ಥಳದಿಂದ ಪಾಂಗಾಳಕ್ಕೆ ಹೋಗಿ ಅಲ್ಲಿಂದ ಜನರನ್ನು ಕರೆದುಕೊಂಡು ವಾಪಸ್ ಧರ್ಮಸ್ಥಳಕ್ಕೆ ಬರುತ್ತದೆ. ಸಂಜೆ 4:15ಕ್ಕೆ ಧರ್ಮಸ್ಥಳದಿಂದ ಪಾಂಗಳಕ್ಕೆ ಬಂದು ಅಲ್ಲಿಂದ ಬಸ್ ಮತ್ತೆ ಧರ್ಮಸ್ಥಳಕ್ಕೆ ಹೊರಡಲಿದೆ. ಇದೇ ಮೊದಲ ಬಾರಿಗೆ ಬಸ್ ಸಂಚಾರವನ್ನು ಪಾಂಗಾಳಕ್ಕೆ ಕಲ್ಪಿಸಿರುವುದು ವಿಶೇಷ. ಈ ಬಸ್ ಸಂಚಾರಕ್ಕೆ ಸೌಜನ್ಯ ತಾಯಿ ಕುಸುಮಾವತಿ ಚಾಲನೆ ನೀಡಿದರು. ಸೌಜನ್ಯ ಮಾವ ಪುರಂದರ ಗೌಡ, ಅಜ್ಜ ಬಾಬು ಗೌಡ, ರಮೇಶ್, ತುಕಾರಾಮ್, ಶೇಖರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಹನ್ನೊಂದು ವರ್ಷಗಳ ಹಿಂದೆ ಕಾಲೇಜು ಮುಗಿಸಿ ಪಾಂಗಾಳ ರಸ್ತೆ ಸಮೀಪ ನಡೆದುಕೊಂಡು ಹೋಗುತ್ತಿದ್ದ ಸೌಜನ್ಯಳನ್ನು ಎಳೆದೊಯ್ದು ಅತ್ಯಾಚಾರ ನಡೆಸಲಾಗಿತ್ತು. ಬಳಿಕ ಕೊಲೆಗೈಯಲಾಗಿತ್ತು. ಆಕೆಯ ಶವ ಮಣ್ಣ ಸಂಕ ಎಂಬಲ್ಲಿ ಪತ್ತೆಯಾಗಿತ್ತು. ಈ ಭಾಗಕ್ಕೆ ಬಸ್ ಸಂಚಾರದ ವ್ಯವಸ್ಥೆಯನ್ನು ಮಾಡಬೇಕು, ಕಾಲೇಜಿಗೆ ತೆರಳುವ ಯುವತಿಯರಿಗೆ ರಕ್ಷಣೆ ನೀಡಬೇಕು ಅನ್ನುವುದು ಸ್ಥಳೀಯರ ಬಹು ದಿನದ ಬೇಡಿಕೆಯಾಗಿತ್ತು. ಅದರಂತೆ ಈಗ ಬಸ್ ವ್ಯವಸ್ಥೆಯನ್ನು ಕಲ್ಪಿಸಿರುವುದು ಸ್ಥಳೀಯರಲ್ಲಿ ಸಂತಸವನ್ನು ಮೂಡಿಸಿದೆ.