ನ್ಯೂಸ್ ನಾಟೌಟ್ :ತಮಿಳುನಾಡಿಗೆ ನೀರು ಬಿಡಬೇಕು ಎಂದು ಕಾವೇರಿ ನೀರು ನಿರ್ವಹಣ ಪ್ರಾಧಿಕಾರ ಆದೇಶ ನೀಡಿದ ಬೆನ್ನಲ್ಲೇ ರಾಜ್ಯ ಸರಕಾರ ಮಂಗಳವಾರ ರಾತ್ರಿಯಿಂದಲೇ 5 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಿದೆ. ಬುಧವಾರ ರಾತ್ರಿ 8 ಗಂಟೆ ವೇಳೆಗೆ ನದಿ ಹಾಗೂ ನಾಲೆಯಿಂದ ಒಟ್ಟು 7,329 ಕ್ಯುಸೆಕ್ ನೀರಿನ ಹೊರಹರಿವು ದಾಖಲಿಸಿದೆ. ಇದಕ್ಕೆ ಮಂಡ್ಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ತಮಿಳುನಾಡಿಗೆ (Tamilnadu) ಕಾವೇರಿ ನೀರು (Cauvery Water) ಬಿಟ್ಟಿದ್ದಕ್ಕೆ ಮಂಡ್ಯದಲ್ಲಿ ರೈತರು ಕೆಂಡಾಮಂಡಲರಾಗಿದ್ದಾರೆ. ಬೀದಿಗೆ ಬಂದು ಅರೆಬಟ್ಟೆಯಲ್ಲೇ ಹೋರಾಟ ನಡೆಸಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಮಂಡ್ಯದ ಶ್ರೀರಂಗಪಟ್ಟಣದಲ್ಲಿ ರೈತರು (Mandya Farmers) ಹರಿಯುತ್ತಿರುವ ನದಿಗೆ ಇಳಿದು ಹೋರಾಟದಲ್ಲಿ ಧುಮುಕಿದ್ದಾರೆ. KRS ಬಳಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಕೂಡಲೇ ತಮಿಳುನಾಡಿಗೆ ನೀರು ನಿಲ್ಲಿಸುವಂತೆ ಒತ್ತಾಯ ಮಾಡಿದ್ದಾರೆ.ಈ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಕಾವೇರಿ ಅರ್ಜಿ ವಿಚಾರಣೆ ನಡೆಯಲಿದ್ದು,ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯತ್ತ ತೆರಳಲಿದ್ದಾರೆ ಎನ್ನುವ ಮಾಹಿತಿಯಿದೆ. ಇಂದು ದೆಹಲಿಯ ಕರ್ನಾಟಕ ಭವನದಲ್ಲಿ ವಕೀಲ ಶ್ಯಾಮ್ ದಿವಾನ್ ಹಾಗೂ ಕಾನೂನು ತಜ್ಞರ ಜೊತೆ ಡಿಕೆ ಶಿವಕುಮಾರ್ ಸಮಾಲೋಚನೆ ನಡೆಸಲಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಇತ್ತ ಮಳೆ ಪ್ರಮಾಣವೂ ಕಡಿಮೆಯಾಗಿದ್ದು, ಕಾವೇರಿ ಕೊಳ್ಳದಲ್ಲಿ ಶೇ.42ರಷ್ಟು ಮಳೆ ಕೊರತೆ ಉಂಟಾಗಿದೆ.ಹೀಗಾಗಿ ರಾಜ್ಯದ ಬಹುತೇಕ ಕಡೆ ಜಲಕ್ಷಾಮ ಉಂಟಾಗಿದೆ.ಮಳೆಗಾಲದಲ್ಲಿಯೇ ರೈತರು ನೀರಿಗಾಗಿ ತೊಂದರೆ ಅನುಭವಿಸುವಂತಾಗಿದೆ.
ಹೀಗಾಗಿ ಸಾಮಾನ್ಯ ವರ್ಷದಂತೆ ನೀರು ಹರಿಸಲು ಆಗಲ್ಲ.ತಮಿಳುನಾಡು 36.76 ಟಿಎಂಸಿ ನೀರು ಕೇಳುತ್ತಿದೆ. ಜಲಾಶಯಗಳಲ್ಲಿ 42% ಕಡಿಮೆ ನೀರು ಸಂಗ್ರಹವಾಗಿದೆ.ಈ ವರ್ಷ ಕರ್ನಾಟಕಕ್ಕೇ ನೀರು ಸಾಕಾಗಲ್ಲ.ಬೆಳೆ ಮತ್ತು ಕುಡಿಯುವ ನೀರಿಗೆ ಕೊರತೆಯಾಗುವ ಸಂಭವನೀಯತೆಯಿದೆ. ಆದಾಗ್ಯೂ ಸರ್ಕಾರ ಕಾವೇರಿ ಸಮಿತಿ ಆದೇಶ ಪಾಲಿಸಿದೆ. 5 ಸಾವಿರ ಕ್ಯೂಸೆಕ್ ನಂತೆ 15 ದಿನ ನೀರು ಹರಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಸಂಸದ ತೇಜಸ್ವಿ ಸೂರ್ಯ “KRS ವಸ್ತು ಸ್ಥಿತಿ ಬಗ್ಗೆ ಸುಪ್ರೀಂ ಕೋರ್ಟ್ಗೆ ಮನವರಿಕೆ ಮಾಡಿಲ್ಲ.ಕಾವೇರಿ ಪ್ರಾಧಿಕಾರದಲ್ಲಿ ಎರಡು ಬಾರಿ ಸೋಲಾಗಿದೆ. ಪ್ರತಿ ದಿನ ತಮಿಳುನಾಡಿಗೆ ನೀರು ಬಿಡ್ತಿದ್ದಾರೆ ಎಂದರು.
ಸರ್ಕಾರ ಕಾವೇರಿ ವಿಷಯದಲ್ಲಿ ಮೊದಲಿನಿಂದಲೂ ಎಡವುತ್ತ ಬಂದಿದೆ. ಈಗಾಗಲೇ ಸಿಡಬ್ಲುಎಂಎ ಆದೇಶದಂತೆ 10 ಸಾವಿರ ಕ್ಯೂಸೆಕ್ಸ್ ನಂತೆ ಸುಮಾರು 15 ಟಿಎಂಸಿ ನೀರು ಬಿಟ್ಟಿದೆ ಆದರೂ ಅದರ ವಿರುದ್ದ ಯಾವುದೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಮಾಜಿ ಸಿಎಂ ಬೊಮ್ಮಾಯಿ ತಮ್ಮ ನೋವನ್ನು ವ್ಯಕ್ತಪಡಿಸಿದರು.
ಈಗ ನೀರು ಬಿಡುತ್ತಿರುವುದರಿಂದ ಕಾನೂನು ಹೋರಾಟಕ್ಕೆ ಅರ್ಥವಿಲ್ಲ. ಕೂಡಲೇ ನೀರು ನಿಲ್ಲಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ ತೀವ್ರವಾದಂತಹ ಮನವರಿಕೆ ಮಾಡುವ ಮೂಲಕ ಕಾನೂನು ಹೋರಾಟ ಮಾಡಬೇಕೆಂದು ಆಗ್ರಹ ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯದ ಕುಡಿಯುವ ನೀರು ಹಾಗೂ ರೈತರ ಹಿತಾಸಕ್ತಿ ಕಾಪಾಡಲು ವಿಫಲವಾಗಿದೆ ಎಂದು ಬೊಮ್ಮಾಯಿ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ರು.