ನ್ಯೂಸ್ ನಾಟೌಟ್ : ರಸ್ತೆಯಲ್ಲಿ ಕಾಡುಕೋಣ ದಾಟಿ ಹೋಗುತ್ತಿದ್ದ ವೇಳೆ ಅದೇ ಮಾರ್ಗವಾಗಿ ಬರುತ್ತಿದ್ದ ಓಮ್ನಿಗೆ ಕಾಡುಕೋಣ ತಾಗಿ ಓಮ್ನಿ ಪಲ್ಟಿಯಾಗಿರುವ ಘಟನೆ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಡೆಂಜಿಗುರಿ ಎಂಬಲ್ಲಿ ವರದಿಯಾಗಿದೆ. ರಾತ್ರಿ ಸುಮಾರು ೧೦ ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಕೂಡಲೇ ಸ್ಥಳೀಯರು ಸ್ಥಳಕ್ಕಾಗಮಿಸಿದ್ದು, ಓಮ್ನಿ ಚಾಲಕನ ಆರೋಗ್ಯವನ್ನು ವಿಚಾರಿಸಿದ್ದಾರೆ. ಸದ್ಯ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.ಕಾಡುಪ್ರಾಣಿಗಳ ಉಪಟಳದಿಂದಾಗಿ ಗ್ರಾಮಸ್ಥರಿಗಾಗುತ್ತಿರುವ ತೊಂದರೆ ಬಗ್ಗೆ ಮಾತನಾಡಿದ್ದಾರೆ.
“ಹಲವು ಸಮಯಗಳಿಂದ ಇಲ್ಲಿನ ಜನರು ಕಾಡುಪ್ರಾಣಿಗಳಿಂದ ತೊಂದರೆ ಅನುಭವಿಸುತ್ತಿದ್ದು ಜೀವಭಯದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ ಮಕ್ಕಳು ಪ್ರತಿನಿತ್ಯ ಶಾಲೆಗೆ ಓಡಾಡುವ ಸ್ಥಳಗಳಲ್ಲಿ ಕಾಡು ಪ್ರಾಣಿಗಳು ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದು ಪೋಷಕರು ದಿನನಿತ್ಯ ಚಿಂತೆಯಲ್ಲೇ ಬದುಕುವಂತಾಗಿದೆ” ಎಂದು ಹೇಳಿದ್ದಾರೆ.
ಮಂಡೆಕೋಲು ಗ್ರಾಮದ ಮುಖ್ಯ ರಸ್ತೆ ಬದಿಯಲ್ಲಿ ದೊಡ್ಡದೊಡ್ಡ ಮರಗಳಿದ್ದು, ಎಲ್ಲಿ ಯಾವಾಗ ಕಾಡುಕೋಣಗಳು ರಸ್ತೆಗೆ ಎಂಟ್ರಿಯಾಗುತ್ತವೆ ಅನ್ನೋದೇ ಭಯ ಕಾಡಲಾರಂಭಿಸಿದೆ.ರಾತ್ರಿ ವೇಳೆ ಪ್ರಯಾಣ ಮಾಡುತ್ತಿರುವಾಗ ಕಾಡು ಪ್ರಾಣಿಗಳು ಮರದ ಅಡ್ಡ ನಿಂತಿದ್ದರೂ ವಾಹನ ಸವಾರರ ಗಮನಕ್ಕೂ ಬರೋದಿಲ್ಲ.ಅವು ರಸ್ತೆ ದಾಟುವ ವೇಳೆ ಬೆಳಕು ಕಂಡಾಗ ಇಂತಹ ಅವಘಡಗಳು ಸಂಭವಿಸುತ್ತದೆ.ಆದ್ದರಿಂದ ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮಳೆಗಾದಲ್ಲಿ ರಸ್ತೆ ಬದಿ ಬಿದ್ದಿರುವ ಮರಗಳ ತೆರವು ಇನ್ನೂ ಆಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.