ನ್ಯೂಸ್ ನಾಟೌಟ್: ಮೊಬೈಲ್ ಫೋನ್ ಬಳಸುವಾಗ ಎಚ್ಚರವಾಗಿರಬೇಕು.ಅದರಲ್ಲೂ ಚಾರ್ಜ್ ಮಾಡುವಾಗ ಮೊಬೈಲನ್ನು ಹಾಗೆಯೇ ಇಡೋದೇ ಬೆಸ್ಟ್.ಯಾಕೆಂದರೆ ಚಾರ್ಚ್ ಆಗುತ್ತಿರುವ ಸಂದರ್ಭದಲ್ಲಿ ಮೊಬೈಲ್ ಬಳಕೆ ಮಾಡಿದ್ರೆ ಎಷ್ಟು ಅಪಾಯಕಾರಿ ಎಂಬೋದರ ಬಗ್ಗೆ ನಿಮ್ಗೆ ಗೊತ್ತೆ ಇದೆ. ಹೌದು,ಇದೀಗ ಬಾಲಕನೋರ್ವ ಮೊಬೈಲ್ ಫೋನ್ ಚಾರ್ಜ್ ಆಗುವಾಗ ಗೇಮ್ ಆಡುತ್ತಿದ್ದು ಮೋಬೈಲ್ ಬ್ಲಾಸ್ಟ್ ಆದ ಘಟನೆ ವರದಿಯಾಗಿದೆ.
ಉತ್ತರ ಪ್ರದೇಶದ ಲಲಿತ್ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಆಘಾತಕಾರಿ ಎಂಬಂತಿದೆ.ಬಾಲಕ ಮೊಬೈಲ್ ಫೋನ್ ಚಾರ್ಜ್ ಆಗುವಾಗ ಗೇಮ್ ಆಡುತ್ತಿದ್ದಾನೆ. ಆಗ ಇದ್ದಕ್ಕಿದ್ದಂತೆ ಮೊಬೈಲ್ ನಲ್ಲಿ ಅಪಾಯಕಾರಿ ಸ್ಫೋಟ ಸಂಭವಿಸಿದೆ. ಇದರಿಂದ ಬಾಲಕನ ದೇಹ ತೀವ್ರವಾಗಿ ಸುಟ್ಟು ಹೋಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವರದಿಗಳ ಪ್ರಕಾರ, ಬಾಲಕನಿಗೆ 12 ವರ್ಷ. ಮದನಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬದೌರಾ ಗ್ರಾಮದ ನಿವಾಸಿ ಉತ್ತಮ್ ಸಿಂಗ್ ತನ್ನ ಮೊಬೈಲ್ ಫೋನ್ ಅನ್ನು ಚಾರ್ಜ್ಗೆ ಹಾಕಿ ಮನೆಯಿಂದ ಆಚೆ ಹೋಗಿದ್ದರೆಂದು ತಿಳಿದು ಬಂದಿದೆ.ಆಗ ಮಗ ಸಚಿನ್ ಅದರಲ್ಲಿ ಆಟವಾಡಲು ಪ್ರಾರಂಭಿಸಿದ. ಗೇಮ್ ಆಡುತ್ತಿದ್ದಾಗ ಏಕಾಏಕಿ ಮೊಬೈಲ್ ಸ್ಫೋಟಗೊಂಡು ಜೋರಾಗಿ ಸದ್ದು ಮಾಡಿದೆ. ಇದರಿಂದ ಮಗು ಗಂಭೀರವಾಗಿ ಗಾಯಗೊಂಡಿದೆ ಎಂದು ತಿಳಿದು ಬಂದಿದೆ.
ಸ್ಫೋಟದ ಸದ್ದು ಕೇಳಿದ ಸಂಬಂಧಿಕರು ಗಾಯಾಳು ಸಚಿನ್ನನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯಲ್ಲಿ ಸಚಿನ್ನ ಎರಡೂ ಕೈ ಮತ್ತು ಬೆರಳುಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದು ಜೀವ ಉಳಿದಿದೆ.
ಈ ರೀತಿ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ, ಇದಕ್ಕೂ ಮೊದಲು, ದೇಶದಲ್ಲಿ ಇದೇ ರೀತಿ ವಿಭಿನ್ನ ಪ್ರಕರಣಗಳು ನಡೆದಿವೆ. ಹೀಗಿದ್ದರೂ ಜನರು ಮುಂಜಾಗ್ರತೆ ವಹಿಸುತ್ತಿಲ್ಲ.ಮಕ್ಕಳಿಗೆ ಮತ್ತೆ ಮತ್ತೆ ಮೊಬೈಲ್ ಗಳನ್ನು ನೀಡುತ್ತಿದ್ದಾರೆ.