ನ್ಯೂಸ್ ನಾಟೌಟ್: ಚಂದ್ರಯಾನ-3 ಅದ್ಧೂರಿಯಾಗಿ ಯಶಸ್ವಿಯಾಗಿದೆ. ಇಡೀ ದೇಶವೇ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡುತ್ತಿದೆ. ಈ ನಡುವೆಯೇ ರಾಜ್ಯ ರಾಜಧಾನಿ ಬೆಂಗಳೂರಿನ ಇಸ್ರೋದಲ್ಲಿ ಕೆಲಸ ನಿರ್ವಹಿಸುತ್ತಿರುವ ವಿಜ್ಞಾನಿಯೊಬ್ಬರ ಕಾರಿನ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಕಲ್ಲೆಸೆದಿದ್ದಾನೆ. ಈ ಪ್ರಕರಣಕ್ಕೆ ವ್ಯಾಪಕ ಖಂಡನೆಯೂ ವ್ಯಕ್ತವಾಗಿದೆ. ಅಷ್ಟೇ ಅಲ್ಲ ವಿಜ್ಞಾನಿಯ ಮೇಲೆರಗುವುದಕ್ಕೂ ಯತ್ನವನ್ನು ನಡೆಸಲಾಗಿದೆ. ಸಂತ್ರಸ್ತ ಇಸ್ರೋ ವಿಜ್ಞಾನಿ ಅಶುತೋಷ್ ಸಿಂಗ್ ಎಂದು ತಿಳಿದು ಬಂದಿದೆ.
ಸದ್ಯ ಮಾದನಾಯಕನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಆಗಸ್ಟ್ 24ರ ತಡರಾತ್ರಿ ಘಟನೆ ನಡೆದಿದೆ. ಕೃತ್ಯ ಎಸಗಿರುವ ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಇಸ್ರೊ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವ ವಿಜ್ಞಾನಿ ಅಶುತೋಷ್ ಸಿಂಗ್ ಎಂದಿನಂತೆ ತನ್ನ ಕ್ವಿಡ್ ಕಾರಿನಲ್ಲಿ ರಾವತ್ತನಹಳ್ಳಿ ಮುಖ್ಯರಸ್ತೆಯಲ್ಲಿ ಹೊರಟಿದ್ದರು. ಈ ಸಂದರ್ಭ ಕಿಡಿಗೇಡಿಗಳು ಅವರ ಕಾರಿಗೆ ಕಲ್ಲು ಎಸೆದಿದ್ದಾರೆ.
ಬಳಿಕ ವಿಜ್ಞಾನಿಯ ಕಾರನ್ನು ಹಿಂಬಾಲಿಸಿದ್ದ ದುಷ್ಕರ್ಮಿಗಳು ಮಾರ್ಗ ಮಧ್ಯೆಯೇ ಹಲ್ಲೆಗೆ ಯತ್ನಿಸಿದ್ದಾರೆ. ಆದರೆ ಯುವವಿಜ್ಞಾನಿ ಆರೋಪಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ ಎಂದು ತಿಳಿದು ಬಂದಿದೆ.