ನ್ಯೂಸ್ ನಾಟೌಟ್: ಮನೆ ಯಜಮಾನಿಗೆ 2000 ನೀಡುವ ಗೃಹ ಲಕ್ಷ್ಮೀ ಯೋಜನೆಗೆ ನಾಳೆ ಮೈಸೂರಿನಲ್ಲಿ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಬೇಡಿಕೊಂಡಿದ್ದನ್ನು ಚಾಮುಂಡೇಶ್ವರಿ ದೇವಿ ಈಡೇರಿಸಿದ್ದಾಳೆ. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಗೂ ಉಪಮುಮಂತ್ರಿ ಡಿಕೆ ಶಿವಕುಮಾರ್ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವತೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹರಿಕೆ ತೀರಿಸಿ ಬಳಿಕ ಮಾಧ್ಯಮದ ಜತೆ ಮಾತನಾಡಿದರು.
ಮೇ 9ರಂದು ನಾನು, ಡಿಕೆ ಶಿವಕುಮಾರ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದೆವು. 5 ಗ್ಯಾರಂಟಿ ಜಾರಿಗೊಳಿಸುವುದಾಗಿ ಹರಕೆ ಹೊತ್ತಿದ್ದೆವು. ಅದರಂತೆ ಇದೀಗ ಇಂದು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದೇವೆ. ನಾಳೆ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದೇವೆ ಎಂದು ಸಿಎಂ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವರು ಸೇರಿ ಆಗಸ್ಟ್ 29ರಂದು ಹಸಿರು ಮತ್ತು ಕೆಂಪು ಸೀರೆ, ಕನಕಾಂಬರ, ಮಲ್ಲಿಗೆ, ಗುಲಾಬಿ ಹೂವಿನ ಹಾರ ಮತ್ತು ಫಲ ಸಮರ್ಪಣೆ ಮಾಡುವ ಮೂಲಕ ತಾಯಿ ಚಾಮುಂಡೇಶ್ವರಿಗೆ ಹೊತ್ತುಕೊಂಡಿದ್ದ ಹರಿಕೆಯನ್ನು ತೀರಿಸಿದರು. ಅಲ್ಲದೇ ನಾಡದೇವತೆ ತಾಯಿ ಚಾಮುಂಡೇಶ್ವರಿಗೆ ಮೊದಲ ಗೃಹಲಕ್ಷ್ಮೀ ಯೋಜನೆಯ 2000 ರೂಪಾಯಿಯನ್ನು ಕಾಣಿಕೆ ಸಂದಾಯ ಮಾಡಿದರು. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು ತಲಾ 2 ಸಾವಿರ ರೂ. ಕಾಣಿಕೆ ಸಲ್ಲಿಸಿದರು.
ಇದೇ ವೇಳೆ ಉಪಮುಖ್ಯಮಂತ್ರಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಚಾಮುಂಡೇಶ್ವರಿ ದೇವಿ ಮುಂದೆ ಗ್ಯಾರಂಟಿ ಕಾರ್ಡ್ ಇಟ್ಟು ಬೇಡಿಕೊಂಡಿದ್ದೆವು. ಗೃಹಲಕ್ಷ್ಮೀ ಯೋಜನೆ ಅನುಷ್ಠಾನಕ್ಕೆ ಶಕ್ತಿ ಕೊಡುವಂತೆ ಬೇಡಿಕೊಂಡಿದ್ದೆವು. ಈಗ ಗೃಹಲಕ್ಷ್ಮೀ ಯೋಜನೆ ಜಾರಿಯಾಗುತ್ತಿದೆ. ಹೀಗಾಗಿ ಇಂದು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದೇವೆ. ಬೆಳಗಾವಿಯಲ್ಲಿ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಚಾಮುಂಡೇಶ್ವರಿಯ ನೆಲದಲ್ಲೇ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.