ನ್ಯೂಸ್ ನಾಟೌಟ್: ಈ ಹಿಂದೆ ಭಾರತದ ವಿಮಾನಗಳನ್ನು ಹಲವು ಭಾರಿ ಹೈಜಾಕ್ ಮಾಡಲು ಯತ್ನಿಸಿದ ಘಟನೆಗಳು ನಡೆದಿದ್ದು, ಸೋಮವಾರ ಕೇರಳದ ಕೊಚ್ಚಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಇಟ್ಟಿರುವುದಾಗಿ ಸೋಮವಾರ ಬೆದರಿಕೆ ಕರೆಯೊಂದು ಬಂದಿದ್ದು, 6E6482 ಇಂಡಿಗೋ ವಿಮಾನ ಬೆಳಗ್ಗೆ 10-30ಕ್ಕೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಬೇಕಿತ್ತು. ಆದರೆ, ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಕೆಳಗಿಳಿಸಿ ತಪಾಸಣೆ ನಡೆಸಲಾಯಿತು.
ಅಲ್ಲದೇ, ಹೆಚ್ಚಿನ ತಪಾಸಣೆಗಾಗಿ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಕೊಂಡೊಯ್ಯಲಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ನಂತರ ಬಾಂಬ್ ನಿಷ್ಕ್ರೀಯ ದಳ, ರಾಜ್ಯ ಪೊಲೀಸ್ ಮತ್ತು ಭದ್ರತಾ ಇಲಾಖೆ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ.
ಘಟನೆ ವೇಳೆ ವಿಮಾನದಲ್ಲಿ 138 ಪ್ರಯಾಣಿಕರು ಮತ್ತು ಒಂದು ಮಗು ಇತ್ತು ಎನ್ನಲಾಗಿದೆ. ಎಲ್ಲರನ್ನು ಭದ್ರತಾ ಪ್ರದೇಶಕ್ಕೆ ಸ್ಥಳಾಂತರಿಸಿ, ಅವರ ಲಗೇಜ್ ಗಳ ಮರು-ಪರಿಶೀಲನೆ ಮಾಡಲಾಯಿತು. ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಇಂಟರ್ನೆಟ್ ಕರೆ ಮೂಲವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 18 ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ದೆಹಲಿ-ಪುಣೆ ವಿಸ್ತಾರಾ ಏರ್ಲೈನ್ಸ್ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಹುಸಿ ಕರೆ ಬಂದ ನಂತರ ಸುಮಾರು ಎಂಟು ಗಂಟೆಗಳ ಕಾಲ ವಿಮಾನ ಹಾರಾಟದಲ್ಲಿ ವಿಳಂಬವಾಗಿತ್ತು ಎಂದು ವರದಿ ತಿಳಿಸಿದೆ.