ನ್ಯೂಸ್ ನಾಟೌಟ್ : ಸೌಜನ್ಯ ಪ್ರಕರಣ ಮುಗಿದು ಹೋದ ಅಧ್ಯಾಯವೆಂದ ಗೃಹ ಸಚಿವ ಜಿ.ಪರಮೇಶ್ವರ್ ಅವರು ಮತ್ತೆ ಸ್ಪಷ್ಟನೆ ನೀಡಿದ್ದಾರೆ. ನ್ಯಾಯಾಲಯ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಿದಲ್ಲಿ ಮರುತನಿಖೆ ಮಾಡಬಹುದು ಎಂದಿದ್ದಾರೆ.
ಸೌಜನ್ಯ ಪ್ರಕರಣ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಬಾರಿ ಬೆಳವಣಿಗಳಾಗುತ್ತಿದ್ದು,ರಾಜಕೀಯ ನಾಯಕರು ಕೂಡ ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸಬೇಕು,ಮರುತನಿಖೆಗೊಳಪಡಿಸಿ ಹಂತಕರು ಯಾರು ಅನ್ನೋದನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ಒದಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಮೊನ್ನೆಯಷ್ಟೇ ಸೌಜನ್ಯ ಪ್ರಕರಣ ಮುಗಿದು ಹೋದ ಅಧ್ಯಾಯವೆಂದ ಡಾ.ಜಿ. ಪರಮೇಶ್ವರ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.ಇದು ಜನರ ಭಾವನೆಗೆ ಸಂಬಂಧಪಟ್ಟದ್ದು.11 ವರ್ಷವಾದರೂ ನಿಜವಾದ ಆರೋಪಿಗಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ ಅಂತಾದರೆ ನಾವು ಯಾವ ವ್ಯವಸ್ಥೆಯಲ್ಲಿದ್ದೇವೆ ಎಂದು ಜನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.
ಇದೀಗ ಸೌಜನ್ಯಾ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು “ಸರಕಾರ ನೇರವಾಗಿ ಮರುತನಿಖೆ ಮಾಡುವಂತಿಲ್ಲ. ಆದರೆ ನ್ಯಾಯಾಲಯ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಿದಲ್ಲಿ ಮರುತನಿಖೆ ಮಾಡಬಹುದು ಎಂದು ಹೇಳಿದ್ದಾರೆ.ತಾಲೂಕಿನ ಹಾರನಹಳ್ಳಿ ಕೋಡಿ ಮಠಕ್ಕೆ ರವಿವಾರ ಭೇಟಿ ನೀಡಿದ್ದ ಸಂದರ್ಭ ಮಾತನಾಡಿದ ಅವರು, ಈಗ ಸೌಜನ್ಯಾ ಪ್ರಕರಣದಲ್ಲಿ ಸರಕಾರದ ನಿಲುವಿನ ಪ್ರಶ್ನೆ ಅಲ್ಲ. ಈಗ ಮರು ತನಿಖೆ ಆಗಬೇಕು ಎನ್ನುತ್ತಿರುವವರು ಕೋರ್ಟ್ಗೆ ಮೇಲ್ಮನವಿ ಸಲ್ಲಿಸಬೇಕು. ಕೋರ್ಟ್ ಏನು ನಿರ್ದೇಶನ ನೀಡುತ್ತದೆಯೋ ಅದನ್ನು ಆಧರಿಸಿ ಸರಕಾರ ಕ್ರಮ ಕೈಗೊಳ್ಳುತ್ತದೆ. ಕೋರ್ಟ್ ಮರು ತನಿಖೆ ಮಾಡಿ ಎಂದು ನಿರ್ದೇಶಿಸಿದರೆ ಸರಕಾರ ಮರು ತನಿಖೆ ಮಾಡಬಹುದು. ಅದನ್ನು ಬಿಟ್ಟುಸರಕಾರ ಏನೂ ಮಾಡಲಾಗದು ಎಂದು ಸ್ಪಷ್ಟಪಡಿಸಿದರು.
ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಸೌಜನ್ಯಾ ಕೊಲೆ ಪ್ರಕರಣ ದಲ್ಲಿ ಕಾನೂನು ಪ್ರಕಾರ ಏನು ಮಾಡಬೇಕಿತ್ತೋ ಅದನ್ನು ಮಾಡಿ ಆಗಿದೆ ಎಂದ ಅವರು ಮರು ತನಿಖೆ ಮಾಡಬೇಕು ಎನ್ನುವವರು ಕೋರ್ಟ್ಗೆ ಹೋಗಿ ನಿರ್ದೇಶನ ತರಲಿ. ಅದನ್ನು ಬಿಟ್ಟು ಎಸ್ಐಟಿ ತನಿಖೆ ರಾಜ್ಯ ಸರಕಾರದ ಹಂತದಲ್ಲಿ ಸಾಧ್ಯವಿಲ್ಲ ಎಂದರು.
ಸೌಜನ್ಯಾ ಪ್ರಕರಣ ಸಿಬಿಐ ತನಿಖೆಯಾಗಬೇಕೆಂಬ ಒತ್ತಾಯದ ಹಿನ್ನೆಲೆಯಲ್ಲಿ ಈ ಹಿಂದೆ ಸಿಬಿಐಗೆ ಪ್ರಕರಣವನ್ನು ವಹಿಸಲಾಗಿತ್ತು. ಸಿಬಿಐನವರು ತನಿಖೆ ನಡೆಸಿ ವರದಿ ಕೊಟ್ಟಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.