ನ್ಯೂಸ್ ನಾಟೌಟ್ :ಮನೆಗೆ ಮಗುವಿನ ಆಗಮನವಾಗುತ್ತೆ ಅಂದ್ರೆ ಆ ಕುಟುಂಬದಲ್ಲಿ ಸಂಭ್ರಮ ಮನೆ ಮಾಡುತ್ತೆ.ಒಂಭತ್ತು ತಿಂಗಳು ಕಳೆದು ಗರ್ಭದಲ್ಲಿರುವ ಮಗು ಭೂಮಿಗೆ ಕಾಲಿಡುತ್ತೆ.ತಂದೆ-ತಾಯಿಗೆ ಆ ಮಗುವಿನ ಮುಖ ನೋಡಿ ಆನಂದ ಭಾಷ್ಪವೇ ಹರಿದು ಬರುತ್ತೆ. ಆ ಪ್ರೀತಿಯನ್ನು ಮಕ್ಕಳು ಉಳಿಸಿಕೊಳ್ಳಬೇಕಲ್ವೇ? ತಂದೆ-ತಾಯಿ ಏನೋ ಬುದ್ಧಿವಾದ ಹೇಳಿದ್ರು ಅಂತ ಅವರನ್ನೇ ಇಲ್ಲವಾಗಿಸಿದರೆ ಹೇಗೆ? ಇಲ್ಲೊಬ್ಬ ಯುವಕ ಮಾಡಿದ್ದು ಅದನ್ನೇ… ಅಮ್ಮ ಮಾಡಿದ ಪಲಾವ್ ನ್ನು ಮೊದಲು ತಿಂದು ,ಬಳಿಕ ಅದರಲ್ಲಿ ವಿಷ ಬೆರೆಸಿ ತನ್ನ ಪೋಷಕರು ಉಸಿರು ಚೆಲ್ಲುವಂತೆ ಮಾಡಿದ ನೀಚ ಕೆಲಸವನ್ನೇ ಮಾಡಿದ್ದಾನೆ.
ಪುತ್ರನೇ ಊಟಕ್ಕೆ ವಿಷ (Poison) ಬೆರೆಸಿ ತಂದೆ ತಾಯಿಯನ್ನು ದುರಂತ ಅಂತ್ಯವನ್ನಾಗಿಸಿದ ಘಟನೆ ನಡೆದಿದ್ದು, ಹಾಸನ ಜಿಲ್ಲೆಯ ಅರಕಲಗೋಡಿನ ಬಿಸಿಲಹಳ್ಳಿಯಲ್ಲಿ. ಅಕ್ರಮ ಸಂಬಂಧವನ್ನು ವಿರೋಧ ವ್ಯಕ್ತಪಡಿಸಿದ್ದಕ್ಕೆ ಪಾಪಿ ಪುತ್ರ ಈ ಕೃತ್ಯ ಎಸಗಿರುವುದು ತನಿಖೆ ವೇಳೆ ಬಯಲಾಗಿದೆ.
ಮಂಜುನಾಥ್ (27) ವಿಷ ಬೆರಸಿದ ಪುತ್ರ. ವಿಧವೆ ಒಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಆರೋಪಿಗೆ ತಂದೆ-ತಾಯಿ ಬುದ್ಧಿವಾದ ಹೇಳಿದ್ದರು. ಅಲ್ಲದೇ ಸಹಕಾರ ಸಂಘಗಳಲ್ಲಿ ಆತನ ತಾಯಿ ಉಮಾ (48)ಮಾಡಿದ್ದ ಸಾಲದ ಹಣವನ್ನು (Money) ಆರೋಪಿ ದುರುಪಯೋಗ ಪಡಿಸಿಕೊಂಡಿದ್ದು,ಅದನ್ನು ಹಣವನ್ನು ವಾಪಸ್ ಕೇಳಿದ್ದಕ್ಕೂ ಆರೋಪಿ ಪೋಷಕರ ಮೇಲೆ ಸಿಟ್ಟಾಗಿದ್ದ. ಇದರಿಂದ ಸ್ಕೆಚ್ ಹಾಕಿದ್ದ ಪುತ್ರ ಅದರಂತೆ ಪಲಾವ್ನಲ್ಲಿ ವಿಷ ಬೆರೆಸಿ ತಂದೆ ಹಾಗೂ ತಾಯಿಯನ್ನು ಬಾರದ ಲೋಕಕ್ಕೆ ಕಳುಹಿಸಿದ್ದಾನೆ.
ಆರೋಪಿ ತಾಯಿಗಿಂತ ಮೊದಲೇ ಪಲಾವ್ ತಿಂದು ನಂತರ ಪಲಾವ್ಗೆ ಕಳೆನಾಶಕ ಬೆರೆಸಿದ್ದ ಎನ್ನಲಾಗಿದೆ. ತಂದೆ ತಾಯಿ-ತಿಂಡಿ ತಿಂದ ಬಳಿಕ ಆರೋಪಿ ಔಷಧಿ ವಾಸನೆ ಬರುತ್ತಿದೆ ಎಂದು ವಾಂತಿ ಮಾಡಿ ನಾಟಕವಾಡಿದ್ದ. ಬಳಿಕ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾಪಸ್ ಕರೆತಂದಿದ್ದ. ಬಳಿಕ ತಾಯಿ ಉಮಾ ಹಾಗೂ ತಂದೆ ನಂಜುಂಡಪ್ಪ (55) ಹಠಾತ್ ಆಗಿ ಕುಸಿದು ಬಿದ್ದು ನಿಧನ ಹೊಂದಿದರು.
ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ದಂಪತಿಯ ಕಿರಿಯ ಪುತ್ರ ಕೊಣನೂರು ಪೊಲೀಸರಿಗೆ (Police) ಮಾಹಿತಿ ನೀಡಿದ್ದ. ಬಳಿಕ ಪೊಲೀಸರು ಅಂತ್ಯಕ್ರಿಯೆ ತಡೆದು ಮರಣೋತ್ತರ ಪರೀಕ್ಷೆಗೆ ಶವಗಳನ್ನು ಸಾಗಿಸಿದ್ದರು. ಬಳಿಕ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮಂಜುನಾಥ್ನನ್ನು ತನಿಖೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿ ವಿಷ ಬೆರೆಸಿದ್ದಾಗಿ ಒಪ್ಪಿಕೊಂಡಿದ್ದಾನೆ.