ನ್ಯೂಸ್ ನಾಟೌಟ್ : ಸೌಜನ್ಯ ಹತ್ಯೆ ಪ್ರಕರಣಕ್ಕೆ (Sowjanya case)ಸಂಬಂಧಿಸಿದಂತೆ ಪ್ರತಿಭಟನೆ ತೀವ್ರತೆ ದಿನದಿಂದ ದಿನಕ್ಕೆ ಚುರುಕು ಪಡೆದುಕೊಳ್ಳುತ್ತಿದೆ. ಆಕೆಯ ನ್ಯಾಯಕ್ಕಾಗಿ ಹಾಗೂ ಮರು ತನಿಖೆಗೆ ಒತ್ತಾಯಿಸಿ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯಾದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದೀಗ ಆ.31ರಂದು ಸುಬ್ರಹ್ಮಣ್ಯದ ಕುಮಾರಧಾರ ಬಳಿಯಿಂದ ದೇವಸ್ಥಾನದ ವರೆಗೆ ಮೌನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದ್ದು, ಸೌಜನ್ಯಳ ನ್ಯಾಯಕ್ಕಾಗಿ ಸುಬ್ರಹ್ಮಣ್ಯದ ಹೋರಾಟ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಿಂದ ನಡೆಯಲಿದೆ ಎಂದು ಸಮಿತಿಯ ಡಾ| ರವಿ ಕಕ್ಕೆಪದವು ಹೇಳಿದ್ದಾರೆ.
ಸುಬ್ರಹ್ಮಣ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ಕುಮಾರಧಾರ ಬಳಿಯಿಂದ ಆರಂಭವಾಗುವ ಪಾದಯಾತ್ರೆ ದೇವಸ್ಥಾನದವರೆಗೆ ಸಾಗಿ ಬರಲಿದೆ. ಅಲ್ಲಿ ಪ್ರಕರಣದ ನೈಜ ಆರೋಪಿಗಳಿಗೆ ಶಿಕ್ಷೆ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿ, ಬಳಿಕ ಸಭೆ ನಡೆಯಲಿದೆ ಎಂದು ಹೇಳಿದರು.ಸಭೆಯಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ತಾಯಿ ಕುಸುಮಾವತಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುಬ್ರಹ್ಮಣ್ಯ ರೋಟರಿ ಕ್ಲಬ್ , ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ, ಜೆಸಿಐ ಸುಬ್ರಹ್ಮಣ್ಯ, ಬಿಎಂಎಸ್ ಆಟೋ ಚಾಲಕ ಮಾಲಕ ಸಂಘ ಸುಬ್ರಹ್ಮಣ್ಯ, ಕುಕ್ಕೇ ಶ್ರೀ ಆಟೋ ಚಾಲಕ ಮಾಲಕ ಸಂಘ, ಕುಕ್ಕೆ ಶ್ರೀ ಟ್ಯಾಕ್ಸಿ ಚಾಲಕ ಮಾಲಕ ಸಂಘ, ಸಂಜೀವಿನಿ ಒಕ್ಕೂಟ,ರವಿಕಕ್ಕೆಪದವು ಸಮಾಜ ಸೇವಾ ಟ್ರಸ್ಟ್, ಸುಬ್ರಹ್ಮಣ್ಯ ವರ್ತಕರ ಸಂಘ, ಗೌಡ ಸಮಿತಿ ಸುಬ್ರಹ್ಮಣ್ಯ ವಲಯ ಹಾಗೂ ವಿವಿಧ ಸಂಘ ಸಂಸ್ಥೆಗಳು ಮತ್ತು ಸ್ಥಳೀಯರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಗೋಪಾಲ ಎಣ್ಣೆಮಜಲು, ದಿನೇಶ್ ಸಂಪ್ಯಾಡಿ, ಚಿದಾನಂದ ಕಂದಡ್ಕ ಗುರುಪ್ರಸಾದ್ ಮೇಲ್ನಾಡ್, ಸತೀಶ್.ಕೆ.ಪಿ. ಕೊಮ್ಮೆಮನೆ, ದಿನೇಶ್ ಶಿರಾಡಿ, ವಿವೇಕಾನಂದ ದೇವರಗದ್ದೆ, ತಿಲಕ್ ಎ.ಎ. ಭಾರತಿ ದಿನೇಶ್, ಶೇಖರ್ ಆಗೋಲಿಕಜೆ ಉಪಸ್ಥಿತರಿದ್ದರು.