ನ್ಯೂಸ್ ನಾಟೌಟ್: ಪುತ್ತೂರಿನಲ್ಲಿ ಯುವತಿಯ ಪ್ರಾಣ ತೆಗೆದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಎರಡು ಸಲ ಮುಚ್ಚಳಿಕೆ ಪತ್ರ ಬರೆದುಕೊಟ್ಟವನು ಕೊನೆಗೂ ಆಕೆಗೊಂದು ಗತಿಯನ್ನು ಕಾಣಿಸಿಯೇ ಬಿಟ್ಟಿದ್ದಾನೆ.ಪುತ್ತೂರಿನಲ್ಲಿ ಹಾಡಹಗಲೇ ಯುವತಿಯ ಕತ್ತು ಸೀಳಿದ ಪ್ರಕರಣದಲ್ಲಿ ಎಲ್ಲೋ ಒಂದು ಕಡೆ ಪೊಲೀಸರೇ ನಿರ್ಲಕ್ಷ್ಯವಹಿಸಿದರೇ ಅನ್ನುವಂತಹ ಅನುಮಾನಗಳು ವ್ಯಕ್ತವಾಗುತ್ತಿದೆ.
ಗೌರಿ ಕೊಲೆ ಆರೋಪಿ ಪದ್ಮರಾಜ್ ಅಳಿಕೆ ಗ್ರಾಮದ ಆದಾಳ ನಿವಾಸಿ ರವೀಂದ್ರ ಮಣಿಯಾಣಿ ಮತ್ತು ಸೀತಾ ದಂಪತಿ ಪುತ್ರಿಗೆ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಈ ಬಗ್ಗೆ ದೂರು ಕೂಡ ದಾಖಲಾಗಿತ್ತು. 2021ರ ಜೂನ್ 7ರಂದು ವಿಟ್ಲ ಠಾಣೆಗೆ ಬರಲು ಹೇಳಿ ಮುಚ್ಚಳಿಕೆ ಪತ್ರ ಬರೆಯಿಸಲಾಗಿತ್ತು. ಇನ್ನು ಮುಂದೆ ಗೌರಿಯ ತಂಟೆಗೆ ಹೋಗುವುದಿಲ್ಲ. ನನ್ನ ತಪ್ಪನ್ನು ತಿದ್ದಿಕೊಂಡಿದ್ದು, ಮುಂದೆ ಕಾನೂನು ಉಲ್ಲಂಘನೆ ಮಾಡಿದರೆ ನನ್ನ ವಿರುದ್ಧ ಕೈಕೊಳ್ಳುವ ಕ್ರಮಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿಕೊಂಡಿದ್ದ.
ಕಿರುಕುಳ ನೀಡುತ್ತಿದ್ದ ಬಗ್ಗೆ ಸೀತಾ ಅವರು ಪದ್ಮರಾಜ್ ವಿರುದ್ಧ ದೂರು ನೀಡಿದ್ದರು. ಆತ ವಿಟ್ಲ ಠಾಣೆಯ ಪೊಲೀಸರಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದ. ಆದರೆ, ಆ ಬಳಿಕವೂ ಆತ ಗೌರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿರಲಿಲ್ಲ. ಆಗ ಸೀತಾ ಅವರು ವಿಟ್ಲ ಠಾಣೆಗೆ 2021ರ ಜುಲೈ 15ರಂದು ಮತ್ತೊಂದು ದೂರು ನೀಡಿದ್ದರು ಎನ್ನುವ ಅಂಶ ಇದೀಗ ಬೆಳಕಿಗೆ ಬಂದಿದೆ.
ಅಪ್ರಾಪ್ತ ವಯಸ್ಕಳಾದ ನನ್ನ ಪುತ್ರಿಗೆ ಪದ್ಮರಾಜ್ ಕರೆ ಮಾಡಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದಾನೆ. ಎರಡು ವರ್ಷಗಳಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ. ವಿದ್ಯಾಭ್ಯಾಸ ಮೊಟಕುಗೊಳಿಸಿ ಬಾ ಎಂದು ಪೀಡಿಸುತ್ತಿದ್ದಾನೆ. ಈ ಮೊದಲೇ ವಿಟ್ಲ ಠಾಣೆಗೆ ದೂರು ನೀಡಿದ್ದೇನೆ, ಪೊಲೀಸ್ ಠಾಣೆಯಲ್ಲಿ ಎಚ್ಚರಿಕೆ ನೀಡಿ ಕಳುಹಿಸಿದ ಬಳಿಕವೂ ಆತ ಕಿರುಕುಳ ನಿಲ್ಲಿಸಿಲ್ಲ.
ಅಪ್ರಾಪ್ತ ವಯಸ್ಸಿನ ನನ್ನ ಪುತ್ರಿ ಅವರ ವಂಚನೆಗೆ ಬಲಿಯಾಗಿರುತ್ತಾಳೆ. ಇದರಿಂದಾಗಿ ಮಗಳ ಭವಿಷ್ಯಕ್ಕೆ ತೊಂದರೆಯಾಗಲಿದ್ದು, ನಮಗೆ ನ್ಯಾಯ ಒದಗಿಸಬೇಕು’ ಎಂದು ಗೌರಿ ತಾಯಿ ಕೋರಿದ್ದರು. ಗೌರಿ ಅವರಿಗೆ ಕಿರುಕುಳ ನೀಡಿದ್ದ ಕುರಿತು ಸುದೀಶ್ ಮತ್ತು ಪ್ರಶಾಂತ್ ಎಂಬವರ ವಿರುದ್ಧವೂ 2020ರ ಡಿಸೆಂಬರ್ 12ರಂದು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು ಎಂದು ಹೇಳಲಾಗಿದೆ.