ನ್ಯೂಸ್ ನಾಟೌಟ್ : ಇಡೀ ಭಾರತವೇ ಭಾರಿ ಕುತೂಹಲದ ಕಣ್ಣುಗಳಿಂದ ನೋಡುತ್ತಿದ್ದ ಚಂದ್ರಯಾನ ೩ ಲ್ಯಾಂಡಿಂಗ್ ಫಲಿತಾಂಶ ಹೊರಬಿದ್ದರೂ, ವಿವಾದಕ್ಕೆ ಒಳಗಾಗಿ ಟ್ರೋಲ್ಗೊಳಗಾಗಿದ್ದ ನಟ ಪ್ರಕಾಶ್ ರಾಜ್ ಪ್ರಕರಣ ಇನ್ನೂ ನಿಲ್ಲುವಂತೆ ಕಾಣುತ್ತಿಲ್ಲ.ಯಾಕೆಂದರೆ ಟ್ರೋಲ್ ಮಾಡುವವರು ಮತ್ತೆ ಮತ್ತೆ ಕೆಣಕಿ ಪೋಸ್ಟ್ ಮಾಡುತ್ತಿದ್ದಾರೆ..!
ಚಹಾ ಮಾಡುವ ವ್ಯಕ್ತಿಯೊಬ್ಬನ ವಿರೂಪಗೊಳಿಸಿದ ಫೋಟೋವೊಂದನ್ನು ಆ. 20ರಂದು ಸೋಷಿಯಲ್ ಮೀಡಿಯಾದಲ್ಲಿ ನಟ ಪ್ರಕಾಶ್ ರಾಜ್ ಪೋಸ್ಟ್ ಮಾಡಿದ್ದ ರು. ‘ವಿಕ್ರಮ್ ಲ್ಯಾಂಡರ್ ಮೂಲಕ ಚಂದ್ರನಿಂದ ಬರುತ್ತಿರುವ ಮೊದಲ ಚಿತ್ರ’ ಎಂಬ ಕ್ಯಾಪ್ಷನ್ ಹಾಕಿ ಫೋಟೋ ಹಂಚಿಕೊಂಡಿದ್ದರು. ಇದಕ್ಕೆ ಕೆಂಡಾಮಂಡಲರಾದ ಟ್ರೋಲಿಗರು ಭಾರಿ ಟೀಕೆಗಳನ್ನು ವ್ಯಕ್ತ ಪಡಿಸಿದ್ದರು.
ನೀವು ಇಸ್ರೋಗೆ ಮಾಡಿದ ಅವಮಾನ, ದೇಶಕ್ಕೆ ಮಾಡಿದ ಅಪಮಾನ ಎಂದು ಹಲವರು ಪ್ರಕಾಶ್ ರಾಜ್ ವಿರುದ್ಧ ಕಿಡಿಕಾರಿದ್ದರು.ಹೀಗೆ ಟ್ರೋಲ್ಗೆ ಗುರಿಯಾಗುತ್ತಿದ್ದಂತೆ ‘ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುವುದು. ನಾನು ನಮ್ಮ ಕೇರಳದ ಚಾಯ್ವಾಲಾರನ್ನು ಸಂಭ್ರಮಿಸುವ ಆರ್ಮ್ಸ್ಟ್ರಾಂಗ್ ಕಾಲದ ಜೋಕನ್ನು ಹೇಳಿದ್ದೆ. ಟ್ರೋಲಿಗರಿಗೆ ಕಂಡ ಚಾಯ್ವಾಲಾ ಯಾರು?’ ಎಂದು ಪ್ರಶ್ನಿಸಿದ ಪ್ರಕಾಶ್ ರಾಜ್, ‘ನಿಮಗೆ ಜೋಕ್ ಅರ್ಥ ಆಗಲಿಲ್ಲವೆಂದರೆ ಜೋಕು ನಿಮ್ಮ ಬಗ್ಗೆಯೇ.. ಬೆಳೆಯಿರಿ’ ಎಂದು ಇನ್ನೊಂದು ಪೋಸ್ಟ್ ಮಾಡಿದ್ದರು.
ಪ್ರಕಾಶ್ ರಾಜ್ ವಿರುದ್ಧ ಅಸಹನೆ ಮತ್ತಷ್ಟು ಹೆಚ್ಚಾಯಿತು. ಟ್ರೋಲಿಗರು ಇನ್ನಷ್ಟು ಟ್ರೋಲ್ ಮಾಡಲಾರಂಭಿಸಿದ್ದು,ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಪೋಸ್ಟರ್ ಎದ್ದು ಕಾಣುತ್ತಿದೆ. ಅದಕ್ಕೆ ಪ್ರತಿಯಾಗಿ ಪ್ರಕಾಶ್ ರಾಜ್ ಇನ್ನೊಂದು ಎಕ್ಸ್ ಮಾಡಿದ್ದರು. ಅನ್ಅಕಾಡೆಮಿ ಟ್ರೋಲ್ಸ್ ಎಂದು ಉಲ್ಲೇಖಿಸಿ ಎಕ್ಸ್ ಮಾಡಿರುವ ಪ್ರಕಾಶ್ ರಾಜ್, ‘ನಿಮಗೆ ಗೊತ್ತಿರುವುದು ಒಂದೇ ಚಾಯ್ವಾಲಾ. 1960ರಿಂದ ಚಾಲ್ತಿಯಲ್ಲಿರುವ ನಮ್ಮ ಮಲಯಾಳಿ ಚಾಯ್ವಾಲಾಗಳ ಕುರಿತ ಹೆಮ್ಮೆಯ ಈ ಸಂಗತಿ ನೋಡಿ’ ಎಂದಿರುವ ಅವರು ಆ ಕುರಿತ ಬರಹದ ಲಿಂಕ್ ಒಂದನ್ನು ಶೇರ್ ಮಾಡಿಕೊಂಡಿದ್ದರು. ಟ್ರೋಲಿಗರು ಓದಿ ವಿಷಯ ತಿಳಿದುಕೊಳ್ಳಿ ಎಂದೂ ಮತ್ತೆ ಕಾಲೆಳೆದಿದ್ದರು.
ಹೀಗೆಚಂದ್ರಯಾನ-3 ಯಶಸ್ವಿ ಆದ ಬಳಿಕ ಪ್ರಕಾಶ್ ರಾಜ್, ಅದಕ್ಕೆ ಮೆಚ್ಚುಗೆ ಸೂಚಿಸಿ, ಧನ್ಯವಾದಗಳು ಎಂದೂ ಎಕ್ಸ್ ಪೋಸ್ಟ್ ಮಾಡಿದ್ದರು. ಹೀಗಾಗಿ ಈ ಟ್ರೋಲ್-ಪೋಸ್ಟ್ ಸಂಘರ್ಷ ಇಲ್ಲಿಗೇ ಮುಗಿಯಿತು ಎಂದುಕೊಳ್ಳುವಂತಾಗಿತ್ತು. ಆದರೆ ಅದಾದ ಬಳಿಕವೂ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.ಟ್ರೋಲಿಗರಿಗೆ ಪ್ರತಿಕ್ರಿಯೆ ಎಂಬಂತೆ ಮತ್ತೆ ಚಾಯ್ವಾಲ್ ಫೋಟೋ ಹಾಕಿಕೊಂಡು ಪ್ರಕಾಶ್ ರಾಜ್ ಮತ್ತೆ ಕೆಣಕಿದ್ದಾರೆ.
‘ಮಲಯಾಳಿ ಚಾಯ್ವಾಲಾ ಎಲ್ಲಿ ಎಂದು ಇನ್ನೂ ಬಡಬಡಿಸುತ್ತಿರುವ.. ಹಾಸ್ಯ ಅರ್ಥವಾಗದ ಹಾಸ್ಯಾಸ್ಪದರೆ.. ಅವನು ಬುದ್ಧಿವಂತ.. ಆತನೀಗ ಮಂಗಳ.. ಶುಕ್ರ ಗ್ರಹಗಳಲ್ಲಿ ಅಂಗಡಿ ಇಟ್ಟಿದ್ದಾನೆ.. ಸಾಧ್ಯವಾದರೆ ಹೋಗಿ 😂😂😂 #justasking’ ಎಂದು ಪ್ರಕಾಶ್ ರಾಜ್ ಮತ್ತೆ ತಮ್ಮದೇ ಶೈಲಿಯಲ್ಲಿ ಪೋಸ್ಟ್ ಮಾಡಿ ಕಾಲೆಳೆದಿದ್ದಾರೆ.