ನ್ಯೂಸ್ ನಾಟೌಟ್ : ಇಂದು ವರಮಹಾಲಕ್ಷ್ಮಿ ಹಬ್ಬ ಅಥವಾ ವ್ರತವನ್ನು ಆಚರಿಸಲಾಗುತ್ತಿದೆ. ಈ ಹಬ್ಬಕ್ಕೆ ಅದರದ್ದೇ ಆದ ವಿಶೇಷತೆ ಇದೆ.ಸಾಮಾನ್ಯವಾಗಿ ಎಲ್ಲಾ ಹೆಣ್ಣು ಮಕ್ಕಳು , ಮಹಿಳೆಯರು ಆಚರಿಸಿ ಸಂಭ್ರಮಿಸುವ ಹಬ್ಬಗಳಲ್ಲಿ ಇದು ಒಂದು. ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಈ ದಿನ ಪೂಜಿಸಿದರೆ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಆಚರಿಸಿಕೊಂಡು ಬರಲಾಗುತ್ತದೆ.
ವರಮಹಾಲಕ್ಷ್ಮೀ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ಹೆಚ್ಚಾಗಿ ದೇವಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸಿದರೆ,ಇನ್ನೂ ಕೆಲವರು ಮನೆಯಲ್ಲೇ ಲಕ್ಷ್ಮಿಯನ್ನು ಕುಳ್ಳಿರಿಸಿ ಅಲಂಕಾರ ಮಾಡಿ ಮಹಿಳೆಯರಿಗೆ ಅರಿಶಿನ ,ಕುಂಕುಮ ,ಹಸಿರು ಬಳೆಗಳನ್ನು ನೀಡೋದು ವಾಡಿಕೆ.
ಶ್ರಾವಣ ಮಾಸದ ಶುಕ್ರವಾರದ ವರಲಕ್ಷ್ಮಿ ವ್ರತ ತುಂಬಾ ವಿಶೇಷವಾಗಿದೆ. ಲಕ್ಷ್ಮಿ ದೇವಿಯ ಆರಾಧನೆಗೆ ಶ್ರಾವಣ ಪೂರ್ಣಿಮಾ ಮುಂಚಿನ ಶುಕ್ರವಾರ ಬಹಳ ಮುಖ್ಯ. ಈ ದಿನ ಲಕ್ಷ್ಮಿಯನ್ನು ಪೂಜಿಸಿದರೆ ಜೀವನದಲ್ಲಿ ಹಣದ ಕೊರತೆ ಎಂದಿಗೂ ಬರುವುದಿಲ್ಲ ಎಂಬ ನಂಬಿಕೆ ನಮ್ಮಲ್ಲಿದೆ.
ಪ್ರತಿಮನೆಮನೆಯಲ್ಲೂ ಪೂಜೆ, ಸಡಗರ, ಸಂಭ್ರಮ ಮುಗಿಲು ಮುಟ್ಟಿದೆ. ಸೋಷಿಯಲ್ ಮೀಡಿಯಾದಲ್ಲೂ ಮಹಿಳೆಯರು ಇಂದಿನ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದತ್ತ ಒಮ್ಮೆ ಕಣ್ಣಾಡಿಸಿದರೆ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದ ಫೋಟೋಗಳೇ ಕಾಣ್ತಿವೆ.ರಂಗೋಲಿ ಹಾಕುತ್ತಿರುವ ಫೋಟೋಗಳು,ಆರಾಧನೆ ಮಾಡುತ್ತಿರುವ ಫೋಟೋಗಳು ಹಾಗೂ ಅಲಂಕಾರ ಮಾಡುತ್ತಿರುವ ಫೋಟೋಗಳೇ ರಾರಾಜಿಸುತ್ತಿವೆ.
ಬೆಳಗ್ಗೆ ಬೇಗ ಎದ್ದು ಮನೆಯ ಮುಂದೆ ರಂಗೋಲಿ ಹಾಕಿ, ದೇವರ ಕೋಣೆಯನ್ನು ಅಲಂಕರಿಸಿ, ವರ ಮಹಾಲಕ್ಷ್ಮಿಗೆ ಪೂಜೆ ಸಲ್ಲಿಸಿ ಮಹಿಳೆಯರು ಭಕ್ತಿ ಪರವಶರಾಗಿದ್ದಾರೆ. ಪ್ರತಿ ಮನೆಯಲ್ಲೂ ಹಬ್ಬದ ಅಡುಗೆ, ತಿಂಡಿತಿನಿಸುಗಳ ಘಂನಿಸುವ ಪರಿಮಳ ಊರಿಡಿ ಹಬ್ಬದೆ. ಅದರಲ್ಲೂ ಬೆಂಗಳೂರಿನಲ್ಲಿ ಈ ಹಬ್ಬದ ಸಂಭ್ರಮವೇ ಬೇರೆ. ಮಹಿಳೆಯರ ಸಂಭ್ರಮಕ್ಕೆ ತೋರಣ, ಅಲಂಕಾರಕ್ಕೆ ನೆರವಾಗುತ್ತ ಪುರುಷರೂ ಸಹಕರಿಸುತ್ತಾರೆ. ಮುಂಜಾನೆಯಿಂದಲೇ ಹಬ್ಬದ ಗಡಿಬಿಡಿಯಲ್ಲಿದ್ದ ಮಹಿಳೆಯರು ಸಾಕ್ಷಾತ್ ಲಕ್ಷ್ಮಿ ದೇವಿಯ ಹಾಗೆ ಕಂಗೊಳಿಸುತ್ತಿದ್ದಾರೆ.
ಪುಟ್ಟ ಲಕ್ಷ್ಮಿಯರು ಸುಂದರ ಉಡುಗೆ ತೊಟ್ಟರೆ , ಮಹಿಳೆಯರು ಹೊಸ ಸೀರೆಯುಟ್ಟು ಸಂಭ್ರಮ ಪಡುತ್ತಿದ್ದಾರೆ.ಮಹಿಳೆಯರ ಈ ಸಂಭ್ರಮ ಸಡಗರ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಟ್ರೆಂಡ್ ಆಗಿದೆ.ಇನ್ನು ಮನೆ ಮನೆಯಲ್ಲಿ ಸುಮಂಗಲಿಯರ ಸಡಗರ, ಸಂಪತ್ತಿನ ಅಧಿದೇವತೆ ದರ್ಶನಕ್ಕಾಗಿ ಹೋಗುವ ಮಹಿಳಾ ಭಕ್ತರಿಗೆ ದೇಗುಲದಲ್ಲಿ ವಿಶೇಷ ಉಡುಗೊರೆ ಸಿಗುತ್ತಿದೆ. ಇಂದು ರಾಜ್ಯದ ಎಲ್ಲಾ ಮುಜರಾಯಿ ದೇಗುಲದಲ್ಲಿಯೂ ಮಹಿಳಾ ಭಕ್ತರಿಗಾಗಿ ಅರಿಶಿನ, ಕುಂಕುಮ, ಬಳೆ, ಕಣವನ್ನು ಕೊಡಲಾಗುತ್ತದೆ. ಮುಜರಾಯಿ ಇಲಾಖೆ ಈಗಾಗಲೇ ಈ ಬಗ್ಗೆ ಸುತ್ತೋಲೆ ಕೂಡ ಹೊರಡಿಸಿದೆ.
ಬೆಂಗಳೂರಿನ ಬನಶಂಕರಿ ದೇಗುಲ ಸೇರಿದಂತೆ ಮುಜರಾಯಿ ದೇಗುಲದಲ್ಲಿ ಇಂದು ಪೂಜೆಗೆ ಎಲ್ಲಾ ಸಿದ್ಧತೆ ಮಾಡಲಾಗಿದ್ದು, ಮಹಿಳಾ ಭಕ್ತರಿಗೆ ಕೊಡುವ ಎಲ್ಲಾ ಅರಿಶಿನ, ಕುಂಕುಮ, ಬಳೆಗಳ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಬರುವಂತಹ ಭಕ್ತರಿಗೆ ಇದನ್ನು ವಿತರಣೆ ಮಾಡಲಾಗುತ್ತದೆ. ಬೆಳಗ್ಗೆಯಿಂದ ಸಂಜೆಯವರೆಗೆ ದೇಗುಲಕ್ಕೆ ಬರುವ ಮಹಿಳಾ ಭಕ್ತರಿಗೆ ಉಡುಗೊರೆ ಕೊಡಲಾಗುತ್ತದೆ.