ನ್ಯೂಸ್ ನಾಟೌಟ್: ಕಲ್ಲುಗುಂಡಿಯಲ್ಲಿಫ್ರೀ ಸರಕಾರಿ ಬಸ್ ಗೆ ಹತ್ತಿದ ಮಹಿಳೆ ಜೊತೆ ಬಸ್ ಕಂಡಕ್ಟರ್ ಕಿರಿಕ್ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ತನ್ನ ಮೇಲಿನ ಎಲ್ಲ ಆರೋಪವನ್ನು ಬಸ್ ಕಂಡಕ್ಟರ್ ನಿರಾಕರಿಸಿದ್ದಾರೆ. ಮಹಿಳೆಯೇ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾಳೆ, ಸಾರ್ವಜನಿಕವಾಗಿ ಅವಮಾನಿಸಿದ್ದಾರೆ. ಈ ಕುರಿತಂತೆ ನಾನು ಕೂಡ ದೂರು ನೀಡುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ಘಟನೆ ಕುರಿತು ನ್ಯೂಸ್ ನಾಟೌಟ್ ಗೆ ಕರೆ ಮಾಡಿ ಮಾತನಾಡಿರುವ ಸುಳ್ಯ-ಕೊಯನಾಡು ಸರ್ಕಾರಿ ಬಸ್ ಕಂಡಕ್ಟರ್ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. “ಸರ್ಕಾರ ನಮಗೆ ಏನು ಹೇಳುತ್ತದೋ ಅದನ್ನು ನಾವು ಪಾಲಿಸಬೇಕು. ನಮ್ಮ ಡಿಪೋದಿಂದ ಸೂಚನೆ ಇರುವಂತೆ ನಾನು ಬಸ್ ನಿಲ್ಲಿಸಲು ಸಾಧ್ಯವಾಗುತ್ತದೆ. ಅಷ್ಟು ಹೇಳಿದ್ದಕ್ಕೆ ನನಗೆ ಮಹಿಳೆ ಬಾಯಿಗೆ ಬಂದಂತೆ ಬೈದು ನಿಂದಿಸಿದ್ದಾಳೆ. ಬಸ್ ನಲ್ಲಿದ್ದ ಪ್ರಯಾಣಿಕರ ಮುಂದೆಯೇ ಅವಮಾನಿಸಿದ್ದಾಳೆ. ಆಕೆ ಆ ದಾರಿಯಲ್ಲಿ ಬರುವ ಬಸ್ ಕಂಡಕ್ಟರ್ , ಡ್ರೈವರ್ ಜೊತೆಗೆ ಪ್ರತಿ ದಿನವೂ ಗಲಾಟೆ ಮಾಡುವುದನ್ನೇ ಉದ್ಯಮ ಮಾಡಿಕೊಂಡಿದ್ದಾಳೆ. ನನ್ನ ವಿರುದ್ಧ ಆಕೆ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ” ಎಂದು ಕಂಡಕ್ಟರ್ ತಿಳಿಸಿದ್ದಾರೆ.
ಈ ಬಗ್ಗೆ ಮುಂದವರಿದು ಮಾತನಾಡಿದ ಬಸ್ ಕಂಡಕ್ಟರ್, “KA 19 F 3160 ಬಸ್ ನಲ್ಲಿ ನಾನು ಕರ್ತವ್ಯ ನಿರ್ವಹಿಸುತ್ತಿದ್ದೆ, ಕಲ್ಲುಗುಂಡಿಯ ಸಮೀಪದ ಕಡಪಾಲದಲ್ಲಿ ಬಸ್ ಇಳಿಯುವುದಕ್ಕೆ ಮೂವರು ಪ್ರಯಾಣಿಕರು ಎದ್ದು ನಿಂತರು. ಎಂದಿನಂತೆ ನಾನು ಬಸ್ ಅನ್ನು ಬಸ್ ನಿಲ್ದಾಣದಲ್ಲಿ ನಿಲ್ಲಿಸಿದೆ. ಇದಕ್ಕೆ ಕೋಪಗೊಂಡ ಮಹಿಳೆ ನೀನು ಸರ್ಕಾರಿ ದುಡ್ಡು ತಿಂದು ಕೊಬ್ಬಿದ್ದೀಯಾ, ಈ ಬಸ್ ನನ್ನ ಮನೆ ಎದುರು ಯಾಕೆ ನಿಲ್ಲುವುದಿಲ್ಲ ಎಂದು ಗಲಾಟೆ ಮಾಡಿದ್ದಾಳೆ, ನನಗೆ ಬೆದರಿಕೆ ಹಾಕಿದ್ದಾಳೆ. ಈ ಬಗ್ಗೆ ನಾನು ಕೂಡ ದೂರು ನೀಡುವುದಾಗಿ ಕಂಡಕ್ಟರ್ ತಿಳಿಸಿದ್ದಾರೆ. ಈ ಬಗ್ಗೆ ಇಂದು ಸುಳ್ಯ ಡಿಪೋದಲ್ಲಿ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ನ್ಯೂಸ್ ನಾಟೌಟ್ ಗೆ ಮೂಲಗಳು ತಿಳಿಸಿವೆ.
ಬಸ್ ಸ್ಟಾಪ್ ಕೊಡದ್ದನ್ನು ನಾನು ಪ್ರಶ್ನಿಸಿದ್ದಕ್ಕೆ ಕಂಡಕ್ಟರ್ ನನಗೆ ಬಾಯಿಗೆ ಬಂದಂತೆ ಬೈಯ್ದಿದ್ದ, ಬೇಕಿದ್ದರೆ ಸ್ವಲ್ಪ ದೂರವಿರುವ ಬಸ್ ಸ್ಟ್ಯಾಂಡಿಗೆ ನಡೆದುಕೊಂಡು ಬಂದು ಅಲ್ಲಿಂದ ಬಸ್ ಹತ್ತಿ. ಬಸ್ ಅನ್ನು ತಂದು ನಿಮ್ಮ ಮನೆಯೊಳಗೆ ನಿಲ್ಲಿಸಲು ಆಗುವುದಿಲ್ಲ. ಜಾಸ್ತಿ ಮಾತನಾಡಿದರೆ ನಿಮ್ಮ ‘ಮುಸುಂಡಿ’ಗೆ ಇಡುತ್ತೇನೆ ಎಂದು ಗದರಿದ್ದಾನೆ ಎಂದು ಮಹಿಳೆ ದೂರಿದ್ದರು.