ನ್ಯೂಸ್ ನಾಟೌಟ್ : 16 ವರ್ಷದ ಬಾಲಕಿಯ ಮೇಲೆ ಕಾಮುಕರು ಅಟ್ಟಹಾಸ ಮೆರೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ ಘಟನೆ ಹೈದರಾಬಾದ್ನಲ್ಲಿ (Hyderabad) ನಡೆದಿದೆ.
ಹೈದರಾಬಾದ್ನ ನಂದನವನಂ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ರಾಚಕೊಂಡ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. POCSO ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಅಬೇದ್ ಬಿನ್ ಖಲೀದ್, ತಹಸೀನ್, ಮಂಕಾಳ ಮಹೇಶ್, ಎಂ ನರಸಿಂಗ್, ಅಶ್ರಫ್, ಫೈಝಲ್ ಮತ್ತು ಇಮ್ರಾನ್ ಎಂದು ಗುರುತಿಸಲಾಗಿದೆ.
ಭಾನುವಾರ ಬೆಳಗ್ಗೆ ಬಾಲಕಿಯ ಮನೆಗೆ ನುಗ್ಗಿದ ಅಬೇದ್ ಮತ್ತು ಆತನ ಸ್ನೇಹಿತರು ಬಾಲಕಿಯ ಮೇಲೆ ಚಾಕುವಿನಿಂದ ಇರಿದಿದ್ದಾರೆ. ಬಳಿಕ ಸಾಮೂಹಿಕವಾಗಿ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. ಘಟನೆಯ ಬಳಿಕ ಸಂತ್ರಸ್ತೆ ಸೋಮವಾರ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾಮಾಂಧರು ಮದ್ಯದ ಅಮಲಿನಲ್ಲಿ ಬೆಳಗ್ಗೆ 9:30ರ ಸುಮಾರಿಗೆ ಆಕೆಯ ಮನೆಗೆ ಬಲವಂತವಾಗಿ ನುಗ್ಗಿ ಈ ಕೃತ್ಯವೆಸಗಿರಬಹುದು ಎಂದು ಹೇಳಲಾಗಿದೆ. ಆಕೆಗೆ ಮತ್ತು ಆಕೆಯ ಸಹೋದರನಿಗೆ ಚಾಕು ತೋರಿಸಿದ್ದಾನೆ ಎಂದು ಉಲ್ಲೇಖಿಸಿ ದೂರನ್ನು ನೀಡಿದ್ದಾಳೆ.
ಈ ಕುರಿತು ಕ್ರಮ ಕೈಗೊಂಡಿರುವ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು 11 ವಿಶೇಷ ತಂಡಗಳನ್ನು ರಚಿಸಿ ಪ್ರಮುಖ ಆರೋಪಿ ಅಬೇದ್ನನ್ನು ಮಂಗಳವಾರ ಸಂಜೆ 4 ಗಂಟೆಯ ಸುಮಾರಿಗೆ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಬೇದ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದು, ಪೊಲೀಸರು ಅವನ ಬಳಿಯಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.
ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅಶ್ರಫ್ ಮತ್ತು ನರಸಿಂಗ್ ಘಟನಾ ಸ್ಥಳದಲ್ಲಿ ಹಾಜರಿದ್ದು, ದುಷ್ಕರ್ಮಿಗಳಿಗೆ ಸಹಾಯ ಮಾಡಿದ್ದಾರೆ.ಮೂವರು ನೇರ ಆರೋಪಿಗಳೆಂದು ಅಲ್ಲದೇ ಫೈಝಲ್ ಮತ್ತು ಇಮ್ರಾನ್ ಆರೋಪಿಗಳ ಹೇಯ ಕೃತ್ಯದ ಬಗ್ಗೆ ತಿಳಿದಿದ್ದರೂ ಅವರಿಗೆ ಸಹಾಯ ಮಾಡಿದ್ದಾರೆ ಎಂದು ರಾಚಕೊಂಡ ಆಯುಕ್ತ ಡಿಎಸ್ ಚೌಹಾಣ್ ತಿಳಿಸಿದ್ದಾರೆ.