ನ್ಯೂಸ್ ನಾಟೌಟ್ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದು.ಅನ್ನಭಾಗ್ಯ ಯೋಜನೆ (Anna Bhagya) ಅಡಿ ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ನೀಡಲು ಘೋಷಿಸಿತ್ತು. ಆದರೆ ಪಡಿತರ ಅಕ್ಕಿ (Rice) ವಿತರಣೆ ವಿಚಾರವಾಗಿ ಯುದ್ಧವೇ ನಡಿತಿದೆ.
ಐದು ಕೆಜಿ ಅಕ್ಕಿಯ ಜೊತೆಗೆ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ನೀಡಲು ನಿರ್ಧರಿಸಿತ್ತಾದರೂ ಕೊನೆಗೆ ಇದು ಸಾಧ್ಯವಾಗಿಲ್ಲ. ಅಕ್ಕಿಯ ಬದಲಾಗಿ ಹಣ ನೀಡುತ್ತಿದೆ.ಹೀಗೆ ಅಕ್ಕಿ ಇಲ್ಲವೆಂದು ಪೇಚಾಡುವ ಸರ್ಕಾರಕ್ಕೆ ಈ ಘಟನೆ ಆಘಾತಕಾರಿ ಎಂಬಂತಿದೆ.ಇಲ್ಲೊಬ್ಬ ಸಿಬ್ಬಂದಿ ಅನ್ನಭಾಗ್ಯ ಯೋಜನೆಯಡಿ ಪಡಿತರ ನೀಡುತ್ತಿದ್ದ ಪ್ರತಿ ಕಾರ್ಡ್ಗೆ 1 ಕೆ.ಜಿ ಅಕ್ಕಿ ಕದಿಯುತ್ತಿರುವುದು ಬೆಳಕಿಗೆ ಬಂದಿದೆ..!
ಸದ್ಯ ಈ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಹೊಳೆ ಗ್ರಾಮದಲ್ಲಿ ನಡೆದಿದೆ.ಸಿದ್ದಪ್ಪ ಎಂಬ ವ್ಯಕ್ತಿ ಫಲಾನುವಿಗಳಿಗೆ ಗೊತ್ತಿಲ್ಲದಂತೆ ಅಕ್ಕಿಯನ್ನು ಕದಿಯುತ್ತಿದ್ದ ಸಿಬ್ಬಂದಿ ಎಂದು ಹೇಳಲಾಗಿದೆ. ಇವರು ಗ್ರಾಮದ ನ್ಯಾಯಬೆಲೆ ಅಂಗಡಿಯ ಲೈಸನ್ಸ್ ಹೊಂದಿದ್ದು,ಇದರಡಿ ಮಾವಿನಹೊಳೆ, ಮರಳಹಟ್ಟಿ, ದಂಡಿಗನಹಳ್ಳಿ ಮತ್ತು ಗಂಡಗನ ಹಂಕಲು ಗ್ರಾಮಗಳ 250 ಕ್ಕೂ ಅಧಿಕ ಕಾರ್ಡ್ಗಳಿವೆ.
ಈ ಸಿಬ್ಬಂದಿ ಅಲ್ಲಿಗೆ ಬರುತ್ತಿದ್ದ ಫಲಾನುಭವಿಗಳಿಗೆ ವಂಚನೆ ಮಾಡುತ್ತಿದ್ದ. ಈ ಗ್ರಾಮಗಳಿಂದ ಬರುವ ಫಲಾನುಭವಿಗಳಿಗೆ ಗೊತ್ತಿಲ್ಲದಂತೆ ಪ್ರತಿ ಕಾರ್ಡಿಗೆ 1 ಕೆ.ಜಿ ಅಕ್ಕಿ ಕದಿಯುತ್ತಿದ್ದನು ಎನ್ನಲಾಗಿದೆ. ಸದ್ಯ ಸಿಬ್ಬಂದಿ ಮಾಡುತ್ತಿದ್ದ ವಂಚನೆಯನ್ನು ಹನಮಂತ ನಾಯ್ಕ್ ಎಂಬ ಯುವಕ ಸಿಬ್ಬಂದಿಗೆ ಅರಿವಾಗದ ರೀತಿಯಲ್ಲಿ ವಿಡಿಯೋ ಮಾಡಿದ್ದಾನೆ.
ಇದಾದ ನಂತರ ಈ ಬಗ್ಗೆ ಪ್ರಶ್ನೆಯನ್ನೂ ಮಾಡಿದ್ದಾನೆ. ಈ ಬಗ್ಗೆ ನೀನೇನು ಮಾತಾಡಬೇಡ. ನಿಂಗೆ ಬೇಕಾದರೇ ಹೆಚ್ಚಿಗೆ ಅಕ್ಕಿ ತೆಗೆದುಕೊಂಡು ಹೋಗು , ಅದು ಬಿಟ್ಟು ನನ್ನಲ್ಲಿ ಪ್ರಶ್ನೆ ಮಾಡಬೇಡ ಎಂದಿದ್ದಾನೆ. ಸದ್ಯ ತಾಲೂಕಿನಾದ್ಯಂತ ಅನೇಕ ಕಡೆಗಳಲ್ಲಿ ಇಂತಹ ಸಮಸ್ಯೆ ತಲೆದೋರಿದ್ದು,ಕಡಿಮೆ ಅಕ್ಕಿ ನೀಡುವ ಸಿಬ್ಬಂದಿಯ ಲೈಸನ್ಸ್ ಅನ್ನು ಕ್ಯಾನ್ಸಲ್ ಮಾಡುವಂತೆ ಜನರು ಒತ್ತಾಯಿಸಿದ್ದಾರೆ. ಜನರ ಒತ್ತಾಯದ ಮೇರೆಗೆ ಈ ಬಗ್ಗೆ ಆಹಾರ ಇಲಾಖೆ, ಆಂತರಿಕ ತನಿಖೆಗೆ ಸೂಚನೆ ನೀಡಿದೆ.
ಅನ್ನಭಾಗ್ಯಕ್ಕೆ ಸಂಬಂಧಿಸಿದಂತೆ ಇಂತಹ ಮತ್ತೊಂದು ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿನಲ್ಲಿಂದಲೂ ಬೆಳಕಿಗೆ ಬಂದಿತ್ತು. ಕೋಟ್ಯಂತರ ಮೌಲ್ಯದ ಪಡಿತರ ಅಕ್ಕಿ ನಾಪತ್ತೆಯಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಬರೊಬ್ಬರಿ 1.32 ಕೋಟಿ ಮೌಲ್ಯದ 3892 ಕ್ವಿಂಟಾಲ್ ಅಕ್ಕಿ ನಾಪತ್ತೆಯಾಗಿದ್ದು, ಫಿಸ್ಟ್ ತಂತ್ರಾಂಶದಲ್ಲಿ ದಾಸ್ತಾನು ಪರಿಶೀಲಿಸಿದಾಗ ಗೋಲ್ಮಾಲ್ ಪತ್ತೆಯಾಗಿತ್ತು.
ಈ ಕುರಿತಂತೆ ಪಡಿತರ ಅಕ್ಕಿ ಅವ್ಯವಹಾರದ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮಂಗಳೂರು ಕಚೇರಿ ವ್ಯವಸ್ಥಾಪಕ ಶರತ್ ಕುಮಾರ್ ಹೋಂಡಾ ಗೋದಾಮಿನ ನಿರ್ವಾಹಕ ವಿಜಯ್ ವಿರುದ್ಧ ದೂರು ನೀಡಿದ್ದರು. ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.