ನ್ಯೂಸ್ ನಾಟೌಟ್: ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳಲ್ಲಿ ನೋಟುಗಳನ್ನಿಟ್ಟು ಮೌಲ್ಯಮಾಪಕರಲ್ಲಿ ಅಂಕಕ್ಕಾಗಿ ನಾನಾ ಕಸರತ್ತುಗಳನ್ನು ಮಾಡಿದ್ದ ಬಗ್ಗೆ ಹಲವು ಸುದ್ದಿಗಳಾಗಿದ್ದವು. ಇತ್ತೀಚೆಗೆ ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಅರುಣ್ ಬೋತ್ರಾ ರೂ. 100, ರೂ. 200, ರೂ. 500 ನೋಟುಗಳಿರುವ ಫೋಟೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈಗ ಭಾರೀ ಸುದ್ದಿಯಾಗುತ್ತಿದೆ.
ಅವರು ತಮ್ಮ ಟ್ವಿಟ್ಟರ್ ನಲ್ಲಿ ‘ಇದು ಶಿಕ್ಷಕರೊಬ್ಬರು ಕಳಿಸಿರುವ ಫೋಟೋ. ವಿದ್ಯಾರ್ಥಿಗಳು ಈ ನೋಟುಗಳನ್ನು ಉತ್ತರಪತ್ರಿಕೆಯೊಳಗೆ ಇಟ್ಟು, ಉತ್ತೀರ್ಣಗೊಳ್ಳಲು ಬೇಕಾದ ಅಂಕಗಳನ್ನು ದಯಪಾಲಿಸಬೇಕೆಂದು ಕೇಳಿಕೊಂಡಿದ್ದಾರೆ. ಈ ಚಿತ್ರವು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸಾಕಷ್ಟು ಸಂಗತಿಗಳನ್ನು ತಿಳಿಯಪಡಿಸುತ್ತಿದೆ’ ಎಂದು ಚಿತ್ರಗಳೊಂದಿಗೆ ಬರೆದುಕೊಂಡಿದ್ದಾರೆ.
ಹಲವು ಬಗೆಯ ಪ್ರತಿಕ್ರಿಯೆಗಳು ಬಂದಿದ್ದು, ಪತ್ರಿಕೆ ಮೌಲ್ಯಮಾಪನಕ್ಕೆಂದು ಹೋದಾಗ ಸುಮಾರು ಮೂರು ಸಲ ನಾನು ಇಂಥದನ್ನು ಎದುರಿಸಿದ್ದೇನೆ ಎಂದು ಒಬ್ಬರು ಬರೆದಿದ್ದು, ಹಣವಷ್ಟೇ ಅಲ್ಲ, ವಿದ್ಯಾರ್ಥಿಗಳು ತಮ್ಮ ಪರಿಸ್ಥಿತಿಯ ಬಗ್ಗೆ ಕಥೆಗಳನ್ನೂ ಬರೆದಿರುತ್ತಾರೆ ಎಂದು ಇನ್ನೊಬ್ಬರು ಹೇಳಿದ್ದಾರೆ.
ಇದು ಹತ್ತಿಪ್ಪತ್ತು ವರ್ಷಗಳಿಂದ ನಡೆಯುತ್ತಲೇ ಇದೆ. ಕೆಲವು ವಿದ್ಯಾರ್ಥಿಗಳು ಇದಕ್ಕಾಗಿಯೇ ಹಣವನ್ನು ಕೂಡಿಡುತ್ತಾರೆ. ನಮ್ಮ ಕಾಲದಲ್ಲಿ ಕೆಲವರು ಉತ್ತರಪತ್ರಿಕೆಗಳಲ್ಲಿ ತಮ್ಮ ಫೋನ್ ನಂಬರುಗಳನ್ನು ಬರೆಯುತ್ತಿದ್ದರು. ಅಕಸ್ಮಾತ್ ಮೌಲ್ಯಮಾಪಕರು ಆ ನಂಬರಿಗೆ ಫೋನ್ ಮಾಡಿದರೆ ಆಯಾ ವಿದ್ಯಾರ್ಥಿಗಳು ಅವರಿಗೆ ಹಣ ತಲುಪಿಸುತ್ತೇನೆ ಪಾಸ್ ಮಾಡುವಂತೆ ಕೇಳಿಕೊಳ್ಳುತ್ತಿದ್ದರು ಎಂದು ಮತ್ತೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಒಟ್ಟಾರೆ ಶಿಕ್ಷಕಿ ಕಳುಹಿಸಿದ ಈ ಫೊಟೋಗಳು ವೈರಲ್ ಆಗುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ಮತ್ತು ವರ್ತನೆಯ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.