ನ್ಯೂಸ್ ನಾಟೌಟ್: ರಕ್ಷಾ ಬಂಧನವು ಸಹೋದರ-ಸಹೋದರಿಯರ ನಡುವಿನ ಪ್ರೀತಿ ಮತ್ತು ಜವಾಬ್ದಾರಿಯ ಬಾಂಧವ್ಯವನ್ನು ಗೌರವಿಸಲು ವಿಶ್ವಾದ್ಯಂತ ಆಚರಿಸುವ ಸಂತೋಷದಾಯಕ ಹಬ್ಬವಾಗಿದೆ. ಈ ರಕ್ಷಾಬಂಧನ ಪ್ರಯುಕ್ತ ಪಾಕಿಸ್ತಾನದ ಕಮರ್ ಮೊಹ್ಸಿನ್ ಶೇಖ್ ಎಂಬ ಸಹೋದರಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟಲಿದ್ದಾರೆ.
ಇದಕ್ಕಾಗಿ ಕಮರ್ ಮೊಹ್ಸಿನ್ ಶೇಖ್ ಆಗಸ್ಟ್ 30ರಂದು ಪಾಕಿಸ್ತಾನದಿಂದ ದೆಹಲಿಗೆ ಆಗಮಿಸಲಿದ್ದಾರೆ. ಇವರು ಕಳೆದ 30 ವರ್ಷಗಳಿಂದ ಪ್ರಧಾನಿ ಮೋದಿಗೆ ರಾಖಿ ಕಟ್ಟುತ್ತಿದ್ದಾರೆ. ಇದೀಗ 31ನೇ ಬಾರಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಪ್ರತಿ ವರ್ಷ ಖಮರ್ ಪ್ರಧಾನಿ ಮೋದಿಯವರಿಗೆ ಸ್ವತಃ ತಾನೇ ಕೈಯಿಂದ ಮಾಡಿದ ರಾಖಿಗಳನ್ನು ಕಟ್ಟುತ್ತಾರೆ. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಕಮರ್ ಅಲ್ಲಿಗೆ ತೆರಳಿ ಅವರ ಕೈಗೆ ರಾಖಿ ಕಟ್ಟಿದ್ದರು. ಅದನ್ನೇ ಈಗಲೂ ಮುಂದುವರಿಸಿದ್ದಾರೆ. ಕೋವಿಡ್-19 ಸಂದರ್ಭ ಪ್ರಧಾನಿ ಮೋದಿಗೆ ರಾಖಿ ಕಟ್ಟಲು ಸಾಧ್ಯವಾಗಲಿಲ್ಲ. ಆದರೆ ಅದನ್ನು ಪೋಸ್ಟ್ ಮೂಲಕ ಕಳುಹಿಸಿದ್ದೇನೆ. ಮದುವೆಯಾದ ನಂತರ ಕಳೆದ 30 ವರ್ಷಗಳಿಂದ ಮೋದಿಗೆ ರಾಖಿ ಕಟ್ಟುತ್ತಿದ್ದೇನೆ ಎಂದು ಕಮರ್ ವಿವರಿಸಿದ್ದಾರೆ. ಅಲ್ಲದೇ ಪ್ರತಿವರ್ಷ ರಾಖಿ ಕಟ್ಟಿದ ನೆನಪಿಗಾಗಿ ಅದರ ಫೋಟೋವನ್ನು ತನ್ನ ಮನೆಯಲ್ಲಿ ಅಚ್ಚುಕಟ್ಟಾಗಿ ಜೋಡಿಸುತ್ತಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ರಕ್ಷಾ ಬಂಧನದ ಶುಭಾಶಯಗಳನ್ನು ತಿಳಿಸುತ್ತೇನೆ. ಅವರಿಗೆ ದೇವರು ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ನಾನು ಪ್ರತಿದಿನ ಪ್ರಾರ್ಥಿಸುತ್ತೇನೆ. ನನ್ನ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಾನು ನಂಬುತ್ತೇನೆ. ನಾನು ರಾಖಿ ಕಟ್ಟಿ ಅವರು ಪ್ರಧಾನಿಯಾಗಬೇಕೆಂದು ನನ್ನ ಆಸೆಯನ್ನು ವ್ಯಕ್ತಪಡಿಸಿದಾಗಲೆಲ್ಲಾ ದೇವರು ನನ್ನ ಬೇಡಿಕೆಯನ್ನು ಪೂರೈಸುತ್ತಾನೆ. ಮೋದಿ ದೇಶಕ್ಕಾಗಿ ಶ್ಲಾಘನೀಯ ಕೆಲಸ ಮಾಡುತ್ತಿದ್ದಾರೆ’ ಎಂದು ಕಮರ್ ಮೊಹಿಸಿನ್ ಬಣ್ಣಿಸಿದ್ದಾರೆ.