ನ್ಯೂಸ್ ನಾಟೌಟ್: ಅನಧಿಕೃತ ಬ್ಯಾನರ್ ಅಳವಡಿಸಿದ್ದಕ್ಕಾಗಿ ಡಿಕೆ ಶಿವಕುಮಾರ್ ಗೆ ಬಿಬಿಎಂಪಿ ದಂಡವಿಧಿಸಿದೆ. ಹೈಕೋರ್ಟ್ ಆದೇಶದ ಪ್ರಕಾರ, ನಗರದಲ್ಲಿ ಅಳವಡಿಸಿರುವ ಅನಧಿಕೃತ ಬ್ಯಾನರ್ ಗಳಿಗೆ ದಂಡ ವಿಧಿಸುವ ಪ್ರಕ್ರಿಯೆಯನ್ನು ಬಿಬಿಎಂಪಿ ಮುಂದುವರೆಸಿದ್ದು, ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಗೆ ಬಿಬಿಎಂಪಿ 50 ಸಾವಿರ ರೂಪಾಯಿ ದಂಡ ವಿಧಿಸಿದೆ.
ಕೆಪಿಸಿಸಿಯಿಂದ ಅನಧಿಕೃತ ಬ್ಯಾನರ್ ಅಳವಡಿಸಿದ್ದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ ಶಿವಕುಮಾರ್ ಅವರಿಗೆ ದಂಡ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಮಾಜಿ ಸಿಎಂ ದಿ. ದೇವರಾಜ ಅರಸು ಜನ್ಮದಿನಾಚರಣೆಯ ಅಂಗವಾಗಿ ಬೆಂಗಳೂರಿನ ವಸಂತನಗರದ ಮಿಲ್ಲರ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಎದುರು ಬ್ಯಾನರ್ ಹಾಕಲಾಗಿತ್ತು. ಈ ಬ್ಯಾನರ್ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು, ರಾಜ್ಯದ ಎಲ್ಲಾ ಪಧಾಧಿಕಾರಿಗಳ ಭಾವಚಿತ್ರವಿತ್ತು ಎನ್ನಲಾಗಿದೆ.
ನಗರದಲ್ಲಿ ಅಳವಡಿಸಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್ಗಳನ್ನು ತೆರವುಗೊಳಿಸುವ ವಿಚಾರವಾಗಿ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್, ಫ್ಲೆಕ್ಸ್, ಬ್ಯಾನರ್ ಅಳವಡಿಸುವಂತಿಲ್ಲ ಎಂದು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಸೂಚನೆ ನೀಡಿತ್ತು. ಈ ಬಳಿಕವೂ ಸರ್ಕಾರದ ನಿಷ್ಕ್ರಿಯತೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್, ಸರ್ಕಾರಕ್ಕೆ ಛೀಮಾರಿ ಹಾಕಿತ್ತು.
ನಿಯಮ ಉಲ್ಲಂಘನೆ ಮಾಡುವವರಿಗೆ 50 ಸಾವಿರ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಈಗ ಕೆಪಿಸಿಸಿ ಕಚೇರಿ ಎದುರು ಕಾಂಗ್ರೆಸ್ ಪಕ್ಷದ ವತಿಯಿಂದ ಅಳವಡಿಸಿದ್ದ ಬ್ಯಾನರ್ಗೇ ದಂಡ ವಿಧಿಸಲಾಗಿದೆ.