ದೇಶದಲ್ಲಿ ಕ್ರಿಕೆಟ್ ಮಂತ್ರ ಜೋರಾಗಿದ್ದ ಸಂದರ್ಭದಲ್ಲಿ ಪರ್ಯಾಯವಾಗಿ ಕಬಡ್ಡಿ ಹುಟ್ಟಿಕೊಂಡಿತು. ಕಬಡ್ಡಿ ಇಂದು ಅಂತಾರಾಷ್ಟ್ರೀಯ ಮಟ್ಟದ ತನಕ ಬೆಳೆದು ನಿಂತಿದೆ. ಕ್ರಿಕೆಟ್ ಆಟಗಾರರಂತೆ ಕಬಡ್ಡಿ ಆಟಗಾರರೂ ಜನಪ್ರಿಯತೆ ಪಡೆದಿದ್ದಾರೆ. ಅಂತಹ ತಾರಾ ಆಟಗಾರರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಶಾಂತ್ ಕುಮಾರ್ ರೈ ಕೂಡ ಒಬ್ಬರು ಅನ್ನುವುದು ವಿಶೇಷ. ಅವರೊಂದಿಗೆ ಬಾಲಚಂದ್ರ ಕೋಟೆ ನಡೆಸಿದ ಸಂದರ್ಶನದ ಪೂರ್ಣ ವಿವರ ಇಲ್ಲಿದೆ ಓದಿ.
- ಕಬಡ್ಡಿಯಲ್ಲಿ ಬೆಳೆದು ಬಂದ ಪರಿ ಹೇಗೆ?
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಕ್ರೀಡಾಪಟು ವಿದ್ಯಾರ್ಥಿಯಾಗಿ ಸೇರ್ಪಡೆಯಾದ ನಾನು ಮೊದಲಿಗೆ ವೈಟ್ ಲಿಫ್ಟರ್ ಆಗಿದ್ದೆ. ದ್ವಿತೀಯ ಪಿಯುಸಿ ವೇಳೆ ಕಬಡ್ಡಿಯಲ್ಲಿ ಆಳವಾದ ಆಸಕ್ತಿ ಬೆಳೆಸಿಕೊಂಡೆ. ಇದೇ ಕೋಟಾದ ಅಡಿ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ದೊರೆತು ಬಳಿಕ ಬ್ಯಾಂಕಿಂಗ್ ಸೇವೆಯೆಡೆಗೆ ತೆರಳಿದೆ
- ಕ್ರೀಡಾ ದೈತ್ಯ ಐಪಿಎಲ್ ಗೆ ಪ್ರೋ ಕಬಡ್ಡಿಯೆ ಸಮಾನ ಪೈಪೋಟಿ, ಅಲ್ಲವೆ?
ಖಂಡಿತ. ಎಲ್ಲ ವಯಸ್ಕರು ವಯಸ್ಸಿನ ತಾರತಮ್ಯವಿಲ್ಲದೆ ಪುರುಷರು ಮಹಿಳೆಯರು ಎಳೆಯರು, ವೃದ್ಧರಿಗೂ ಪ್ರೋ ಕಬಡ್ಡಿ ಎಂದರೆ ಅಚ್ಚುಮೆಚ್ಚು.ಕಾರಣ ಕಬಡ್ಡಿ ಬಗೆಗಿನ ಅವರಿಗಿರುವ ಜ್ಞಾನ ಹಾಗೂ ಆಸಕ್ತಿ.
- ಎಲ್ಲಾ ಸೀಸನ್ ಆಡಿದ ಕೆಲವೇ ಆಟಗಾರರಲ್ಲಿ ನೀವೂ ಒಬ್ಬರು. ಅನುಭವ?
ಬಹಳ ಹೆಮ್ಮೆಯ ವಿಚಾರ.ದೀರ್ಘ ಅವಧಿಗೆ ದೈಹಿಕ ಕ್ಷಮತೆಯೊಂದಿಗೆ ಆಡುವುದೆದಂದರೆ ತಮಾಷೆಯಲ್ಲ. ಪ್ರೋ ಕಬಡ್ಡಿಯಲ್ಲಿ ಬಹಳ ಪೈಪೋಟಿ ಇದ್ದು, ಯುವ ಆಟಗಾರ ರ ದೈಹಿಕ ಕ್ಷಮತೆಗೆ ಸಮಾನವಾಗಿ ಹಿರಿಯ ಆಟಗಾರರೂ ಇರಬೇಕಾಗುತ್ತದೆ.ಆದರೆ ಕಠಿಣ ಪರಿಶ್ರಮದಿಂದ ಅಸಾಧ್ಯವಾದುದು ಯಾವುದೂ ಇಲ್ಲವಷ್ಟೆ.
- ಯುವ ಪ್ರತಿಭೆಗಳಿಗೆ ನಿಮ್ಮ ಕಿವಿಮಾತು?
ಕಬಡ್ಡಿಯಲ್ಲಿ ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ. ಬದ್ಧತೆ, ಶಿಸ್ತು ಹಾಗೂ ಅವಿರತ ಶ್ರಮವೇ ಕಬಡ್ಡಿ ಆಟಗಾರನ ಯಶಸ್ಸಿನ ರಹಸ್ಯ.
- ಕಬಡ್ಡಿಯಲ್ಲಿ ಮುಂದಿನ ಗುರಿ ?
ಈ ಬಾರಿಯ ಬಿಡ್ಡಿಂಗ್ ನಲ್ಲಿ ಒಳ್ಳೆಯ ತಂಡಕ್ಕೆ ಆಯ್ಕೆಯಾಗಿದ್ದು ಸಂತಸ.ಕಳೆದ ಏಳು ಸೀಸನ್ ಪೈಕಿ ಮೂರು ಸೀಸನಿನಲ್ಲಿ ಪಟ್ನ ಪೈರೇಟ್ಸ್ ಚಾಂಪಿಯನ್. ಇಂತಹ ತಂಡದ ಪರ ಆಡುವುದೇ ಹೆಮ್ಮೆ.ಕೊರೋನಾ ಪ್ರೊಟೊಕಾಲ್ ಅಂದರೆ ಬಯೋಬಬಲ್ ವ್ಯಾಪ್ತಿಯಲ್ಲಿದ್ದುಕೊಂಡು ಖಂಡಿತ ಅತ್ಯುತ್ತಮ ಪ್ರದರ್ಶನ ನೀಡಲು ನಾನು ಸರ್ವಾಂಗಿಣ ಪ್ರಯತ್ನ ನಡೆಸುವೆ.
- ಕಬಡ್ಡಿ ಒಲಿಂಪಿಕ್ಸ್ ಗೆ ಸೇರ್ಪಡೆಗೊಳ್ಳುವ ಕುರಿತು ನಿಮ್ಮ ಅಭಿಪ್ರಾಯ?
ಪ್ರೋ ಕಬಡ್ಡಿ ಯಶಸ್ಸು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊರೆತಿದೆ. ಈಗೀಗ ವಿದೇಶದಲ್ಲೂ ಪ್ರೋ ಕಬಡ್ಡಿ ಮಾದರಿಯಲ್ಲಿ ಟೂರ್ನಿಗಳನ್ನು ಆಯೋಜಿಸಲಾಗುತ್ತಿದೆ. ಇದು ಭಾರತದ ದೇಸಿ ಕ್ರೀಡೆಗೆ ದೊರೆತ ಜಯ. ಒಲಿಂಪಿಕ್ಸ್ ಗೆ ಕಬಡ್ಡಿ ಸೇರ್ಪಡೆಗೊಂಡರೆ ಅದು ಭಾರತಕ್ಕೆ ಐತಿಹಾಸಿಕ ಕ್ಷಣವೆಂದು ನನ್ನ ಅಭಿಪ್ರಾಯ.
- ಕ್ರೀಡಾಪಟುಗಳಿಗೆ ದೀಪಾವಳಿ ಬಹಳ ವಿಶೇಷ.ನಿಮ್ಮ ಪಾಲಿಗೆ?
ಸಾಮಾನ್ಯವಾಗಿ ಕ್ರೀಡಾಪಟುಗಳಿಗೆ ದೀಪಾವಳಿ ವಿಶೇಷವೇ. ಯಾಕೆಂದರೆ ಅವರಿಗೆ ಈ ಹಬ್ಬಗಳ ಆಚರಣೆಗೆ ಅವಕಾಶ ಕಡಿಮೆ ದೊರೆಯುತ್ತಿದ್ದು, ಸದಾ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಹಬ್ಬಗಳ ಆಚರಣೆ ಕೊಂಚ ಕಷ್ಟವೇ.ಈ ವರ್ಷವೂ ಕಬಡ್ಡಿ ಕ್ಯಾಂಪ್ ಆರಂಭವಾಗಲಿದ್ದು, ದೀಪಾವಳಿ ಆಚರಣೆ ತುಸು ದೂರದ ಮಾತು.ಆದರೆ ಅವಕಾಶ ದೊರೆತರೆ ಸಂತೋಷದಿಂದ ನಾವು ಆಚರಿಸುತ್ತೇವೆ.
ಕಳೆದ 5 ಸೀಸನಿನಲ್ಲಿ ಪ್ರಶಾಂತ್ ರೈ ಬಿಡ್ಡಿಂಗ್ ಮೊತ್ತ
ಸೀಸನ್ ಮೊತ್ತ(ಲಕ್ಷ) ತಂಡ
4 13.80 ದಬಾಂಗ್ ಡೆಲ್ಲಿ
5 21 ಹರಿಯಾಣ ಸ್ಟೀಲರ್ಸ್
6. 79 ಯುಪಿ ಯೋಧಾ
7. 77 ಹರಿಯಾಣ ಸ್ಟೀಲರ್ಸ್
8. 55 ಪಾಟ್ನಾ ಪೈರೇಟ್ಸ್