ನ್ಯೂಸ್ ನಾಟೌಟ್ : ಜಿಂಕೆಯನ್ನು ಬೇಟೆಯಾಡಿ ಬಾಡೂಟಕ್ಕೆ ತಯಾರಿ ಮಾಡುತ್ತಿರುವಾಗ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿರುವ ಘಟನೆ ವರದಿಯಾಗಿದೆ.ಈ ವೇಳೆ ಜಿಂಕೆ ಮಾಂಸ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಭದ್ರ ಹುಲಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಯ ಚಿಕ್ಕಮಗಳೂರು ಜಿಲ್ಲೆಯ ಮುತ್ತೋಡಿ ಅರಣ್ಯ ಅಂಚಿನಡಿಯಲ್ಲಿ ಈ ಘಟನೆ ನಡೆದಿದೆ.ಚಿಕ್ಕಮಗಳೂರು ತಾಲೂಕು ಹುಲ್ಲುವತ್ತಿ ಗ್ರಾಮದ ಸಮೀಪದ ಕಾಫಿ ತೋಟದಲ್ಲಿ ಬೃಹತ್ ಗಾತ್ರದ ಜಿಂಕೆ ಬೇಟೆಯಾಡಿ ಪಾರ್ಟಿ ಮಾಡುತ್ತಿದ್ದಾಗ ಅಧಿಕಾರಿಗಳ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡಿದ್ದು, ಕಾಫಿ ತೋಟಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಜಿಂಕೆ ಶಿಕಾರಿ ಮಾಡಿದ್ದಾರೆಂದು ತಿಳಿದು ಬಂದಿದೆ.ಬಳಿಕ ಅಲ್ಲೇ ಬಾಡೂಟಕ್ಕೆ ತಯಾರಿ ಮಾಡಿದ್ದು, ಭರ್ಜರಿ ಭೋಜನ ಇನ್ನೇನು ಸವಿಯಲು ಆರಂಭಿಸುತ್ತಿರುವಾಗಲೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು ದಾಳಿ ಮಾಡಿದ್ದು, ಮೊಹಮ್ಮದ್ ಶಕೀಲ್ ಸೇರಿದಂತೆ ಆರು ಮಂದಿಯನ್ನು ಬಂಧಿಸಿ, ಜೊತೆಗೆ 8 ಕೆ.ಜಿ. ಜಿಂಕೆ ಮಾಂಸ ಹಾಗೂ ನಾಡ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಜಿಂಕೆ ಸುಮಾರು 25 ಕೆ.ಜಿ. ತೂಕವಿತ್ತು ಎನ್ನಲಾಗಿದ್ದು, ಜಿಂಕೆಯನ್ನು ಶಿಕಾರಿ ಮಾಡಿರುವ ಆರೋಪವನ್ನು ಆರೋಪಿಗಳು ಎದುರಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳ ಕಳ್ಳ ಬೇಟೆ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.