ನ್ಯೂಸ್ ನಾಟೌಟ್ : ಒಂದು ತಿಂಗಳಿನಿಂದ ಮಗಳು ಕಾಣೆಯಾಗಿದ್ದು,ಬಳಿಕ ಆಕೆ ಮೃತದೇಹ ಸಿಕ್ಕಿದ್ದು ಅಂತ್ಯ ಸಂಸ್ಕಾರ ನೆರವೇರಿತು. ನಂತರ ಶ್ರಾದ್ಧ ಕರ್ಮ ತಯಾರಿಯಲ್ಲಿ ತೊಡಗಿಕೊಂಡಿದ್ದಾಗ ಅಪ್ಪಾ ನಾನಿನ್ನು ಬದುಕಿದ್ದೇನೆ ಎಂದು ಮಗಳು ವಿಡಿಯೋ ಕಾಲ್ ಮಾಡಿರುವ ಅಪರೂಪದ ಘಟನೆ ವರದಿಯಾಗಿದೆ.
ಮಗಳು ಅಂಶು ಕುಮಾರಿ ಕಾಣೆಯಾದ ಹುಡುಗಿ.ಆಗಸ್ಟ್ 15 ರಂದು ದುಧ್ವಾ ಗ್ರಾಮದ ಕಾಲುವೆಯಲ್ಲಿ ತೇಲುತ್ತಿದ್ದ ಅಪರಿಚಿತ ಹುಡುಗಿಯ ಶವವನ್ನು ಪೊಲೀಸರು ವಶಪಡಿಸಿಕೊಂಡರು. ಮೃತದೇಹದ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಬಿಶನ್ಪುರದ ನಿವಾಸಿ ವಿನೋದ್ ಮಂಡಲ್ ಮೃತ ದೇಹವನ್ನು ತನ್ನ ಮಗಳು ಅಂಶು ಕುಮಾರಿ ಎಂದು ಗುರುತಿಸಿದ್ದಾರೆ. ಅದು ಹಲವು ದಿನಗಳ ಶವವಾಗಿದ್ದರಿಂದ ಆಕೆಯ ಮುಖ ಪರಿಚಯಿಸಲು ಅಸಾಧ್ಯವಾಗಿತ್ತು. ಯುವತಿಯ ದೇಹದ ಮೇಲಿದ್ದ ಬಟ್ಟೆ ಮತ್ತು ಬೆರಳುಗಳ ಆಧಾರದ ಮೇಲೆ ಸಂಬಂಧಿಕರು ಮೃತದೇಹವನ್ನು ಗುರುತಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಗಳು ಅಂಶು ಕುಮಾರಿಯ ವಿಡಿಯೋ ಕರೆ ನೋಡಿ ತಂದೆಯ ಸಂತೋಷಕ್ಕೆ ಪಾರವೇ ಇರಲಿಲ್ಲ.ಆಕೆಯ ಕುಟುಂಬ ಸದಸ್ಯರು ಅಂತಿಮ ವಿಧಿವಿಧಾನಗಳನ್ನು ಅದಾಗಲೇ ಮಾಡಿದ್ದರು. ಹಾಗಾದರೆ ಅದು ಅಂಶುಕುಮಾರಿಯ ಶವವಲ್ಲದಿದ್ದರೆ ಯಾರ ಶವ ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದರು. ಮೃತ ದೇಹವನ್ನು ಗುರುತಿಸುವಲ್ಲಿ ಹೇಗೆ ತಪ್ಪಾಯಿತು ಎಂದು ಸಂಬಂಧಿಕರು ಚಿಂತಿತರಾದರು. ಇತ್ತ ಮಗಳು ಸತ್ತಿದ್ದಾಳೆಂದು ಅಂತ್ಯಕ್ರಿಯೆ ನಡೆಸಲಾಗಿತ್ತು.
ಯುವಕನನ್ನು ಲವ್ ಮಾಡಿದ್ದ ಅಂಶು ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದಳು. ಕುಟುಂಬಸ್ಥರು ಮಗಳನ್ನು ತಮ್ಮದೇ ಮಟ್ಟದಲ್ಲಿ ಹುಡುಕಿದರೂ ಆಕೆಯ ಕುರುಹು ಪತ್ತೆಯಾಗಿರಲಿಲ್ಲ. ಹಾಗಾಗಿ ಅಂಶುವನ್ನು ಕೊಂದು ಶವವನ್ನು ಕಾಲುವೆಗೆ ಎಸೆಯಲಾಗಿದೆ ಎಂದು ಸಂಬಂಧಿಕರು ಊಹಿಸಿ ಆಕೆಯ ಶವ ಇದಾಗಿರಬಹುದು ಎಂದು ಊಹಿಸಿದ್ದರು.
ಅಂಶು ಕುಮಾರಿ ಮನೆಯಿಂದ ನಾಪತ್ತೆಯಾದ ಬಳಿಕ ತನ್ನ ಪ್ರಿಯಕರನನ್ನು ದೇವಸ್ಥಾನದಲ್ಲಿ ಮದುವೆಯಾಗಿದ್ದಳೆಂದು ತಿಳಿದು ಬಂದಿದೆ.ಆಕೆ ತನ್ನ ಅತ್ತೆಯೊಂದಿಗೆ ವಾಸವಾಗಿದ್ದು, ತನ್ನ ಅಂತ್ಯಕ್ರಿಯೆಯ ವಿಚಾರ ಸುದ್ದಿ ಮಾಧ್ಯಮದಲ್ಲಿ ಬಂದಾಗ ಅಂಶು ದಿಗ್ಭ್ರಮೆಗೊಳ್ಳುತ್ತಾಳೆ. ಬಂಧುಗಳ ಒಪ್ಪಿಗೆ ಇಲ್ಲದೇ ಮದುವೆಯಾಗಿರುವ ಭಯದಿಂದ ಕೊನೆಗೆ ಶುಕ್ರವಾರ ತನ್ನ ತಾಯಿಯ ಮನೆಗೆ ವಿಡಿಯೋ ಕಾಲ್ ಮಾಡಿ ತಾನು ಬದುಕಿರುವುದಾಗಿ ತಿಳಿಸಿದ್ದಾಳೆ.ಇದನ್ನು ಕೇಳಿ ಪೋಷಕರೇ ದಿಗ್ಭ್ರಾಂತರಾಗಿದ್ದಾರೆ.
ಇದೀಗ ಅಂಶು ಬದುಕುಳಿದಿರುವ ಬಗ್ಗೆ ವರದಿಯಾಗಿದೆ.ಹಾಗಾದರೆ ಅದು ಯಾವ ಬಾಲಕಿಯ ಮೃತದೇಹ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಆ ಮೃತದೇಹ ಗಮನಿಸಿದಾಗ ಅತ್ಯಾಚಾರದ ನಂತರ ಕೊಲೆಯಾಗಿರುವ ಸಾಧ್ಯತೆಯೂ ವ್ಯಕ್ತವಾಗಿದೆ.ಈ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.ಅಪರಿಚಿತ ಮೃತದೇಹದ ಅಂತಿಮ ಸಂಸ್ಕಾರವನ್ನು ಮಾಡಲಾಗಿದೆ. ಮೃತದೇಹದ ಬಳಿ ಸಿಕ್ಕ ಅಗತ್ಯ ವಸ್ತುಗಳು ಹಾಗೂ ಬಟ್ಟೆಗಳು ಇನ್ನೂ ಸುರಕ್ಷಿತವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಮೃತದೇಹ ಯಾರದ್ದೆಂದು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.