ನ್ಯೂಸ್ ನಾಟೌಟ್: ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ 20 ವರ್ಷಗಳ ಬಳಿಕ 2024ರ ಕುಂಭ ಮಾಸದಲ್ಲಿ ಕಳಿಯಾಟ ಮಹೋತ್ಸವ ನಡೆಸಲು ಸಿದ್ಧತೆ ಪ್ರಾರಂಭಗೊಂಡಿವೆ. ಈ ಕಳಿಯಾಟ ಮಹೋತ್ಸವವನ್ನು ಅವಿಸ್ಮರಣೀಯಗೊಳಿಸುವ ಉದ್ದೇಶದಿಂದ ‘ಪ್ರಕೃತಿಗೆ ಹಸಿರು ಹೊದಿಸಿ ಒಂದು ಕಳಿಯಾಟ ಕಾಲ’ ಎಂಬ ವಿಶೇಷ ಪರಿಕಲ್ಪನೆಯೊಂದಿಗೆ 3000 ಫಲವೃಕ್ಷ ಸಸಿಗಳನ್ನು ನೆಡುವ ಬೃಹತ್ ಕಾರ್ಯಕ್ರಮವನ್ನು ಕಳಿಯಾಟ ಸಮಿತಿ ಹಾಗೂ ಕ್ಷೇತ್ರದ ವತಿಯಿಂದ ಆಯೋಜಿಸಲಾಗಿದೆ.
ಆಗಸ್ಟ್ 20ರಂದು ಬೆಳಗ್ಗೆ 10 ಗಂಟೆಗೆ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಮನೆ ಹಾಗೂ ಇತರ ಬಂಧು ಮಿತ್ರರ ಮನೆಗಳು ಸೇರಿ ಏಕಕಾಲದಲ್ಲಿ ಒಟ್ಟು 3000 ಸಸಿಗಳನ್ನು ನೆಡಲಾಗುತ್ತಿದೆ. ಈ ಕಾರ್ಯಕ್ರಮವನ್ನು ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಸಲು ಪುತ್ತೂರು ವಾಣಿಯನ್ /ಗಾಣಿಗ ಸಮಾಜ ಸೇವಾ ಸಂಘ ಸಿದ್ಧತೆಗಳನ್ನು ನಡೆಸಿದೆ. ಪುತ್ತೂರು ಸಂಘದ ವ್ಯಾಪ್ತಿಯಲ್ಲಿ ಸಂಘದ ಅಧ್ಯಕ್ಷ ಪ್ರಸಾದ್ ಬಿ. ಕಲ್ಲರ್ಪೆ ಮನೆಯಲ್ಲಿ ಬೆಳಗ್ಗೆ 10 ಗಂಟೆಗೆ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬಳಿಕ ಪುತ್ತೂರು ಸಂಘದ ವ್ಯಾಪ್ತಿಗೊಳಪಟ್ಟ ಕಡಬ ಹಾಗೂ ಪುತ್ತೂರು ತಾಲೂಕಿನ ಸುಮಾರು 400 ಸಮಾಜ ಬಾಂಧವರ ಮನೆಗಳಲ್ಲಿ ಫಲವೃಕ್ಷ ಸಸಿಗಳನ್ನು ನೆಡುವ ಯೋಜನೆ ಆಯೋಜಿಸಲಾಗಿದೆ.
ಪ್ರಕೃತಿಯ ಸಂರಕ್ಷಣೆಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕೆಂಬ ಆಶಯವನ್ನು ಎತ್ತಿ ಹಿಡಿದು ಗಿಡ ನೆಡುವ ಮತ್ತು ಸಂರಕ್ಷಿಸುವ ಕಾರ್ಯವನ್ನು ಮಾಡಲಾಗುತ್ತದೆ. ನಾಡನ್ನು ಪರಿಪೂರ್ಣವಾಗಿ ಭಕ್ತಿ ಸಾಗರದಲ್ಲಿ ಮಿಂದೆಬ್ಬಿಸುವ ಕಳಿಯಾಟ ಮಹೋತ್ಸವ ಮುಗಿದು ಹೋದರೂ, ಹಚ್ಚ ಹಸಿರಿನೊಂದಿಗೆ ಪ್ರಕೃತಿಯಲ್ಲಿ ತಲೆಯೆತ್ತಿ ಮೆರೆದಾಡಲು ಈ ಮರಗಳಿರಬೇಕು ಎಂಬ ಆಶಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ವಾಣಿಯನ್ /ಗಾಣಿಗ ಸಮುದಾಯದವರು ಕುಲದೇವತೆಯನ್ನಾಗಿ ಆರಾಧಿಸಿಕೊಂಡು ಬರುತ್ತಿರುವ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ನೆಲೆಸಿರುವ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಾಮೂಹಿಕ ವಿವಾಹದಂತಹ ವಿಭಿನ್ನ ಕಾರ್ಯಕ್ರಮಗಳ ಮೂಲಕ ಕ್ಷೇತ್ರ ಎಲ್ಲರ ಗಮನ ಸೆಳೆದಿದೆ. ಹಿಂದೂ ಸಂಪ್ರದಾಯದ ಅನೇಕ ಆಚಾರ ವಿಚಾರಗಳನ್ನು ಇಂದಿಗೂ ಉಳಿಸಿಕೊಂಡು ಪಾಲಿಸುತ್ತಿರುವುದು ಈ ಸಮುದಾಯದ ಹೆಗ್ಗಳಿಕೆಯಾಗಿದೆ ಎಂದು ಪುತ್ತೂರು ವಾಣಿಯನ್ ಗಾಣಿಗೆ ಸಮಾಜ ಸೇವಾ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.