ನ್ಯೂಸ್ ನಾಟೌಟ್: ಅಪಾಯದ ಆಹ್ವಾನವನ್ನು ನೀಡಿಕೊಂಡು ಬಾಯ್ತೆರೆದು ಕುಳಿತಿದ್ದ ಯಮ ಸ್ವರೂಪಿ ಗುಂಡಿಯನ್ನು ಸುಳ್ಯದ ನಗರ ಪಂಚಾಯತ್ ಮುಚ್ಚಿದೆ.ನ್ಯೂಸ್ ನಾಟೌಟ್ ಮಾಧ್ಯಮವು ಸುಳ್ಯದ ಕಂದಾಯ ಇಲಾಖೆ ಅಧೀಕ್ಷಕರ ಕಚೇರಿ ಸಮೀಪದ ರಸ್ತೆಯಲ್ಲಿ ಯಮಸ್ವರೂಪಿ ಗುಂಡಿ…! ಇನ್ನೂ ಎಚ್ಚೆತ್ತುಕೊಳ್ಳದ ಸ್ಥಳೀಯಾಡಳಿತ, ವಾಹನ ಸವಾರರೇ ಎಚ್ಚರ’ ಅನ್ನುವ ಶೀರ್ಷಿಕೆಯಡಿ ಶುಕ್ರವಾರ ಸಂಜೆ ವರದಿ ಪ್ರಕಟಿಸಿತ್ತು. ಈ ವರದಿ ಬೆನ್ನಲ್ಲೇ ಶನಿವಾರ ಮಧ್ಯಾಹ್ನ ನಗರ ಪಂಚಾಯತ್ ಅಧಿಕಾರಿಗಳು ಸಿಬ್ಬಂದಿ ಜೊತೆ ಬಂದು ಗುಂಡಿಯನ್ನು ಮುಚ್ಚಿದ್ದಾರೆ. ನಗರ ಪಂಚಾಯತ್ ಹೆಲ್ತ್ ಸೂಪರ್ ವೈಸರ್ ತಿಮ್ಮಪ್ಪ ನೇತೃತ್ವದಲ್ಲಿ ಹೊಂಡ ಮುಚ್ಚುವ ಕಾರ್ಯ ನಡೆದಿದೆ.
ನಗರದ ಕೊಳಚೆ ನೀರು ಹೋಗುತ್ತಿದ್ದ ಕಾರಣಕ್ಕೆ ಗುಂಡಿ ಬಂದ್ ಆಗಿತ್ತು. ಇದರಿಂದ ನೀರು ತುಂಬಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುವುದಕ್ಕೂ ಅಸಹ್ಯದ ವಾತಾವರಣ ಉಂಟಾಗಿತ್ತು. ಸುಳ್ಯ ವಿವೇಕಾನಂದ ಸರ್ಕಲ್ ಅನತಿ ದೂರದಲ್ಲಿದ್ದ ಈ ಗುಂಡಿ ಬೈಕ್ ಸವಾರರಿಗೆ ದೊಡ್ಡ ಅಪಾಯದ ಸಾಧ್ಯತೆಯನ್ನು ತೆರೆದಿತ್ತು. ಅಪ್ಪಿ ತಪ್ಪಿ ಗುಂಡಿಗೆ ಬಿದ್ದರೆ ಪ್ರಾಣವೇ ಹೋಗುವ ಆತಂಕವಿತ್ತು. ಇದೀಗ ನ್ಯೂಸ್ ನಾಟೌಟ್ ವರದಿ ಬೆನ್ನಲ್ಲೇ ಈ ಸಮಸ್ಯೆಗೆ ಪೂರ್ಣ ವಿರಾಮ ಬಿದ್ದಿದೆ.