ನ್ಯೂಸ್ ನಾಟೌಟ್ :ಇತ್ತೀಚೆಗೆ ಸಣ್ಣ ಸಣ್ಣ ಕಾಯಿಲೆಗಳಿಗೂ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೋ ಅಥವಾ ವೈದ್ಯರ ನಿರ್ಲಕ್ಷ್ಯವೋ (Medical Negligence)ಅಮಾಯಕರು ಜೀವವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಉಡುಪಿ ಮೂಲದ ಯುವಕನೊಬ್ಬ ಬೆಂಗಳೂರಿನಲ್ಲಿ ವೈದ್ಯನ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದು ಖೇದಕರ ಸಂಗತಿ.
ಅಮರ್ ಶೆಟ್ಟಿ (31) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.ಆ. 13ರಂದು ಜ್ವರವೆಂದು ಮಾಗಡಿ ರಸ್ತೆಯಲ್ಲಿರುವ ಕ್ಲಿನಿಕ್ ವೊಂದಕ್ಕೆ ಹೋಗಿದ್ದರು. ಈ ವೇಳೆ ಕ್ಲಿನಿಕ್ನಲ್ಲಿ ವೈದ್ಯನೊಬ್ಬ ಜ್ವರಕ್ಕಾಗಿ ಅಮರ್ಗೆ ಇಂಜೆಕ್ಷನ್ ಕೊಟ್ಟಿದ್ದರು ಎಂದು ಹೇಳಲಾಗಿದೆ.ಆದರೆ ಇದನ್ನು ಪಡೆದುಕೊಂಡ ಯುವಕ ವಾಪಸ್ ಮನೆಗೆ ಬಂದಿದ್ದಾಗ ರಿಯಾಕ್ಷನ್ ಆಗಿತ್ತು.ಬೆಳಗಾಗುವುದರಲ್ಲಿ ಊತ ಕಂಡಿದ್ದು, ಜತೆಗೆ ಕಾಲು, ಸೊಂಟದ ಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ.
ಅಮರ್ ಮತ್ತೆ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದರು. ಆಗಲೂ ಸೊಂಟದ ಭಾಗದಲ್ಲಿ ಊತವು ಕಡಿಮೆಯೇ ಆಗಿರಲಿಲ್ಲ. ನೋವು ಇನ್ನಷ್ಟು ಹೆಚ್ಚಾಗಿತ್ತು. ಹೀಗಾಗಿ ಮತ್ತೆ ಬೇರೋಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಮರ್ ನಿನ್ನೆ ಶುಕ್ರವಾರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇದು ವೈದ್ಯರ ನಿರ್ಲಕ್ಷ್ಯದಿಂದಲೇ ಆಗಿದ್ದು,ಇಂಜೆಕ್ಷನ್ ಅಡ್ಡ ಪರಿಣಾಮದಿಂದಲೇ ಮಲ್ಟಿ ಆರ್ಗನ್ ಡ್ಯಾಮೇಜ್ ಆಗಿ ಮೃತಪಟ್ಟಿದ್ದಾಗಿ ಆರೋಪಿಸಿ ಕುಟುಂಬಸ್ಥರು ಠಾಣೆ ಮೆಟ್ಟಿಲೇರಿದ್ದಾರೆ.ಸದ್ಯ ಮೊದಲು ಭೇಟಿಯಾದ ಭಾಗ್ಯ ಕ್ಲಿನಿಕ್ ವೈದ್ಯನ ವಿರುದ್ಧ ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಇಂತಹ ಘಟನೆ ನಂಬಲು ಅಸಾಧ್ಯವಾಗಿದೆ.ಇದು ಸತ್ಯಕ್ಕೆ ದೂರವಾದ ಮಾತು.ಈ ಕ್ಲಿನಿಕ್ ಕಳೆದ ನಲವತ್ತು ವರ್ಷಗಳಿಂದ ಸೇವೆ ನೀಡುತ್ತಿದೆ. ಅಮರ್ ಶೆಟ್ಟಿ ಕಳೆದ ಭಾನುವಾರ ಚಿಕಿತ್ಸೆಗಾಗಿ ಕ್ಲಿನಿಕ್ಗೆ ಬಂದಿದ್ದು,ಕ್ಲಿನಿಕ್ಗೆ ಬರುವಾಗ ಸ್ಟೇಬಲ್ ಆಗಿದ್ದರು. ವಿಚಾರಿಸಿದಾಗ ಜ್ವರ, ಕೆಮ್ಮು ಇರುವುದಾಗಿ ಹೇಳಿದ್ದರು. ಪರೀಕ್ಷಿಸಿ ಬಳಿಕ ಇಂಜೆಕ್ಷನ್ ಕೊಟ್ಟು, ಎರಡು ದಿನ ಬಿಟ್ಟು ಬರುವಂತೆ ಸೂಚಿಸಿದ್ದೆ. ಏನಾದರೂ ಅಡ್ಡ ಪರಿಣಾಮ ಆಗಿದ್ದರೆ ಮತ್ತೆ ಬರಬೇಕಿತ್ತು. ಆದರೆ ಯಾರು ಬಂದಿಲ್ಲ. ನಿನ್ನೆ ಆತ ಮೃತಪಟ್ಟಿದ್ದಾಗಿ ಮಾಹಿತಿ ಬಂತು ಎಂದು ಹೇಳಿದ್ದಾರೆ.
ಅಮರ್ ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದರು.ಕಳೆದ ೧ ವರ್ಷದ ಹಿಂದೆ ಬೆಂಗಳೂರಿಗೆ ವಾಪಾಸ್ಸಾಗಿದ್ದರು. ಹೀಗೆ ಬೆಂಗಳೂರಿನಲ್ಲಿ ಹೊಟೇಲ್ ಬ್ಯುಸಿನೆಸ್ ಮಾಡುತ್ತಾ ನೆಮ್ಮದಿಯ ದಿನವನ್ನು ಕಳೆಯುತ್ತಿದ್ದರು. ಈ ಮರ್ಧಯೆ ಯುವಕನಿಗೆ ಮದುವೆಗೂ ಸಿದ್ಧತೆ ಮಾಡಿಕೊಂಡಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಕಾರ್ಯಕ್ರಮವೂ ನಡೆಯುವುದಿತ್ತು.ಅಷ್ಟೊತ್ತಿಗಾಗಲೇ ಈ ದುರಂತ ಸಂಭವಿಸಿದೆ ಎಂದು ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.
ಆತ ಚೆನ್ನಾಗಿದ್ದ.ಸಣ್ಣ ಜ್ವರ ಬಂತೆಂದು ಇಂಜೆಕ್ಷನ್ ನೀಡಿ ಡಾಕ್ಟರ್ ಸಾಯಿಸಿಬಿಟ್ಟಿದ್ದಾರೆ ಎಂದು ಅಮರ್ ಸಹೋದರ ರಾಘವೇಂದ್ರ ಶೆಟ್ಟಿ ಆಕ್ರೋಶ ಹೊರಹಾಕಿದ್ದಾರೆ. ಕೆ.ಪಿ.ಅಗ್ರಹಾರದಲ್ಲಿ ಮಾವನ ಜತೆಗೆ ಇದ್ದ. ಜ್ವರ ಎಂದು ಭಾಗ್ಯ ಕ್ಲಿನಿಕ್ಗೆ ಹೋಗಿದ್ದ. ಇಂಜೆಕ್ಷನ್ ಕೊಟ್ಟ ಬಳಿಕ ಆ ಜಾಗವು ಊದಿಕೊಂಡಿತ್ತು. ಅಮರ್ ಸಾವಿಗೆ ನ್ಯಾಯ ಕೊಡಿಸಬೇಕು ಎಂದಿದ್ದಾರೆ.