ನ್ಯೂಸ್ ನಾಟೌಟ್: ಸುಳ್ಯ ವಿವೇಕಾನಂದ ಸರ್ಕಲ್ ಅನತಿ ದೂರದಲ್ಲಿ ಕಂದಾಯ ಇಲಾಖೆ ಅಧೀಕ್ಷರ ಕಚೇರಿ ಬಳಿಯ ರಸ್ತೆ ಸಮೀಪದ ಒಳಚರಂಡಿಗೆ ಸ್ಲ್ಯಾಬ್ ಮುಚ್ಚದ ಕಾರಣ ವಾಹನ ಸವಾರರು, ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಗುಂಡಿಗೆ ಬೀಳುವ ಸಾಧ್ಯತೆಯಿದೆ.
ಅಲ್ಲದೇ ಒಳಚರಂಡಿಯಲ್ಲಿ ಕೊಳಚೆ ನೀರು ತುಂಬಿದ್ದು, ಮಳೆ ಬಂದರೆ ರಸ್ತೆಯನ್ನು ಆವರಿಸುವ ಸಾಧ್ಯತೆಯಿದೆ. ಚರಂಡಿಗೆ ಈ ಹಿಂದೆ ಹಾಕಿದ ಸ್ಲ್ಯಾಬ್ ಮುರಿದ ಪರಿಣಾಮ ಅಪಾಯಕಾರಿ ಬಾಯ್ತೆರೆದಿದೆ. ಮಳೆ ಬಂದು ನೀರು ತುಂಬಿದಾಗ ವಾಹನ ಸವಾರರು ಎದುರಿನಿಂದ ಬರುವ ವಾಹನಕ್ಕೆ ಸೈಡ್ ಕೊಡುವ ನಿಟ್ಟಿನಲ್ಲಿ ಸ್ವಲ್ಪ ಬದಿಗೆ ಸರಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ಸುಳ್ಯದ ವಿವೇಕಾನಂದ ಸರ್ಕಲ್ ಮೂಲಕ ಪ್ರತಿದಿನ ಹಲವಾರು ವಾಹನಗಳು ಮಿನಿ ವಿಧಾನ ಸೌಧ, ನ್ಯಾಯಾಲಯ, ಶಿಕ್ಷಣ ಸಂಸ್ಥೆ, ಖಾಸಗಿ ಆಸ್ಪತ್ರೆಗೆ ಹೋಗುವವರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ ಈ ಅಪಾಯಕಾರಿ ಗುಂಡಿ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಕಂಟಕವಾಗಿದೆ.
ಇದರ ಸಮೀಪದಲ್ಲೇ ಹಲವಾರು ಸರ್ಕಾರಿ ಕಚೇರಿಗಳು ಇವೆ. ಇಲ್ಲಿನ ಅಧಿಕಾರಿಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಕಳೆದ ಹಲವಾರು ತಿಂಗಳುಗಳಿಂದ ತಲೆದೋರಿರುವ ಈ ಸಮಸ್ಯೆ ಯಾವೊಬ್ಬ ಅಧಿಕಾರಿ ಗಮನಕ್ಕೆ ಬಾರದಿರುವುದು ಮಾತ್ರ ವಿಪರ್ಯಾಸವಾಗಿದೆ. ಈ ಬಗ್ಗೆ ಸ್ಥಳೀಯ ನಗರ ಪಂಚಾಯತ್ , ಸಂಬಂಧಪಟ್ಟ ಇಲಾಖೆ ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಅವಘಡ ಸಂಭವಿಸುವ ಮೊದಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಶೀಘ್ರ ದುರಸ್ತಿ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.