ನ್ಯೂಸ್ ನಾಟೌಟ್ : ಬುರ್ಖಾ ಧರಿಸಿ ಕೇರಳದ ಕೊಚ್ಚಿಯ ಜನಪ್ರಿಯ ಶಾಪಿಂಗ್ ಕಾಂಪ್ಲೆಕ್ಸ್ ಲುಲು ಮಾಲ್ ಗೆ ಬಂದ ಟೆಕ್ಕಿಯೊಬ್ಬ ಮಹಿಳೆಯರ ವಾಶ್ರೂಮ್ ಗೆ ಪ್ರವೇಶಿಸಿ ಅಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಸಿಕ್ಕಿಬಿದ್ದಿದ್ದಾನೆ ಎಂದು ವರದಿ ತಿಳಿಸಿದೆ.
ಆರೋಪಿಯನ್ನು ಬಿಟೆಕ್ ಪದವೀಧರ ಅಭಿಮನ್ಯು (23) ಎಂದು ಗುರುತಿಸಲಾಗಿದ್ದು, ಕೊಚ್ಚಿ ನಗರದ ಇನ್ಫೋಪಾರ್ಕ್ನಲ್ಲಿರುವ ಪ್ರಮುಖ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ. ಈತನನ್ನು ಬುಧವಾರ (ಆಗಸ್ಟ್ 16) ಪೊಲೀಸರು ಬಂಧಿಸಿದ್ದಾರೆ.
ನಂತರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕೊಚ್ಚಿ ಪೊಲೀಸರು ತಿಳಿಸಿದ್ದಾರೆ. ಬುರ್ಖಾ ಧರಿಸಿ ಲುಲು ಮಾಲ್ ನ ಮಹಿಳೆಯರ ವಾಶ್ರೂಮ್ ಪ್ರವೇಶಿಸಿದ ಅಭಿಮನ್ಯು ಅಲ್ಲಿ ತನ್ನ ಮೊಬೈಲ್ ಅಳವಡಿಸಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ.
ಮೊಬೈಲ್ ಅನ್ನು ಸಣ್ಣ ರಟ್ಟಿನ ಬಾಕ್ಸ್ನಲ್ಲಿ ಇರಿಸಿ ಕ್ಯಾಮೆರಾ ಮಾತ್ರ ಕಾಣುವಂತೆ ರಂಧ್ರ ಮಾಡಿ ಇರಿಸಿದ್ದ ಎಮದು ಪೊಲೀಸರು ತಿಳಿಸಿದ್ದಾರೆ.
ಕ್ಯಾಮೆರಾ ಇಟ್ಟು ಅಲ್ಲಿಂದ ಹೊರಬಂದು ವಾಶ್ ರೂಂನ ಮುಖ್ಯ ಬಾಗಿಲಿನ ಮುಂದೆ ನಿಂತಿದ್ದ ಆತನ ಅನುಮಾನಾಸ್ಪದ ವರ್ತನೆಯನ್ನು ಗಮನಿಸಿದ ಮಾಲ್ನ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ ಪೊಲೀಸರಿಗೆ ವಿಚಾರ ತಿಳಿದು ಬಂದಿದೆ. ಆರೋಪಿಯ ಬುರ್ಖಾ ಹಾಗೂ ಮೊಬೈಲ್ ವಶಪಡಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಐಪಿಸಿಯ ಸೆಕ್ಷನ್ 354 (ಸಿ), 419 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಇ ಅಡಿಯಲ್ಲಿ ಆರೋಪಿ ಅಭಿಮನ್ಯು ವಿರುದ್ಧ ಕೇಸ್ ದಾಖಲಿಸಲಾಗಿದೆ.