ನ್ಯೂಸ್ ನಾಟೌಟ್ :ಕೊಡಗಿನ ಕೆಲವು ಕಡೆಗಳಲ್ಲಿ ಆನೆಗಳ ಹಾವಳಿ ವಿಪರೀತವಾಗಿದೆ.ಆನೆ ದಾಳಿಗೊಳಗಾಗಿ ಅನೇಕರು ಸಾವನ್ನಪ್ಪಿದರೆ ಇನ್ನೂ ಅನೇಕ ಮಂದಿ ಗಾಯಗೊಂಡ ಘಟನೆ ವರದಿಯಾಗುತ್ತಲೇ ಇದೆ.ಇದಕ್ಕಾಗಿ ರೈತರ ಜಮೀನಿನಲ್ಲಿ ಬೀಡುಬಿಟ್ಟು ಬೆಳೆ ನಷ್ಟ ಮಾಡುತ್ತಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.
ಮಡಿಕೇರಿ ವಿಭಾಗದ ಸೋಮವಾರಪೇಟೆ ಅರಣ್ಯ ವಲಯ ವ್ಯಾಪ್ತಿಯಲ್ಲಿರುವ ಗರ್ವಾಲೆ, ಸೂರ್ಲಬ್ಬಿ, ಮಂಕ್ಯ ಗ್ರಾಮಗಳ ರೈತರ ಜಮೀನಿನಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು ಬೆಳೆ ನಷ್ಟ ಮಾಡುತ್ತಿದೆ. ಇವುಗಳು ಜನವಸತಿ ಪ್ರದೇಶಗಳಲ್ಲಿ ಓಡಾಡುತ್ತಾ ಇರೋದ್ರಿಂದ ಜನರ ಆತಂಕಕ್ಕೆ ಕಾರಣವಾಗಿದೆ.
ಇದೀಗ ರೈತರು ಬೆಳೆನಷ್ಟ ಅನುಭವಿಸುವುದಲ್ಲದೇ ಪ್ರಾಣಾಪಾಯವನ್ನು ಎದುರಿಸುತ್ತಿದ್ದಾರೆ. ಸಾರ್ವಜನಿಕರು ರಸ್ತೆಯಲ್ಲಿ ಓಡಾಡುವುದಕ್ಕೂ ಭಯಪಡುತ್ತಿದ್ದಾರೆ.ಶಾಲಾ ವಿದ್ಯಾರ್ಥಿಗಳು ಕೂಡ ಭಾರೀ ಆತಂಕದಲ್ಲಿಯೇ ಶಾಲೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದೀಗ ಜೀವ ಭಯ ತಂದೊಡ್ಡಿರುವ ಮರಿಯಾನೆ ಒಳಗೊಂಡಂತೆ ಒಟ್ಟು 4 ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವ ಕಾರ್ಯಾಚರಣೆಯನ್ನು ಆ.19 ಮತ್ತು 20 ರಂದು ಕೈಗೊಳ್ಳಲಾಗುತ್ತಿದೆ ಎಂದು ಅರಣ್ಯ ಇಲಾಖೆ ಪ್ರಕಟಣೆ ಮೂಲಕ ತಿಳಿಸಿದೆ.
ಸೂರ್ಲಬ್ಬಿ, ಮಂಕ್ಯ, ತಾಕೇರಿ, ಕಿರಂಗದೂರು, ಕಾಜೂರು ಮಾರ್ಗವಾಗಿ ಕ್ರಮಕೈಗೊಳ್ಳುವುದರಿಂದ ಮೇಲ್ಕಂಡ ಗ್ರಾಮಗಳೂ ಸೇರಿದಂತೆ ತಾಕೇರಿ, ಕಿರಗಂದೂರು, ಕಾಜೂರು ಮತ್ತು ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ತೋಟದ ಮತ್ತು ಜಮೀನಿನ ಕೆಲಸಗಳನ್ನು ಮಾಡದಂತೆ ಅರಣ್ಯ ಇಲಾಖೆ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದೆ.
ಕಾಡಾನೆ ಓಡಿಸುವ ಸಮಯದಲ್ಲಿ ಶಾಲಾ ಮಕ್ಕಳು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆಯೂ ಸೂಚಿಸಲಾಗಿದೆ. ಸೋಮವಾರಪೇಟೆ ವಲಯದ ವಲಯ ಅರಣ್ಯಾಧಿಕಾರಿ ಹೆಚ್.ಪಿ.ಚೇತನ್ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.