ನ್ಯೂಸ್ ನಾಟೌಟ್ : ಜೀವನದಲ್ಲಿ ಸ್ವಾಭಿಮಾನಿಯಾಗಿ ಬದುಕು ಕಟ್ಟಿಕೊಳ್ಳುವ ಕನಸಿನೊಂದಿಗೆ ಹಲವು ಯವಕರು ವಿದೇಶ ಪ್ರಯಾಣ ಮಾಡುತ್ತಾರೆ. ಹೀಗೆ ಸಾವಿರ ಕನಸುಗಳನ್ನು ಹೊತ್ತುಕೊಂಡು ವಿದೇಶಕ್ಕೆ ಹೋದ ಕಡಬದ ಯುವಕನೊಬ್ಬನ ಕಥೆ-ವ್ಯಥೆ ಇದು.ಹೌದು, ವಿದೇಶಕ್ಕೆ ಉದ್ಯೋಗಕ್ಕೆ ತೆರಳಿದ್ದು, ಬ್ಯಾಂಕ್ ಖಾತೆ ಹ್ಯಾಕರ್ಗಳ ಸುಳಿಗೆ ಸಿಲುಕಿ ವಂಚನೆ ಆರೋಪಕ್ಕೆ ಒಳಗಾಗಿ ಅಲ್ಲಿ ಬಂಧಿಯಾಗಿದ್ದಾರೆ.ಇದೀಗ ಬಿಡುಗಡೆಗಾಗಿ ಕುಟುಂಬಸ್ಥರು ಕೇಂದ್ರ ಸರಕಾರದ ಮೊರೆ ಹೋಗಿದ್ದಾರೆ.
ಕಡಬ ತಾಲೂಕಿನ ಊತ್ತೂರು ಗ್ರಾಮದ ಮುಜೂರು ದಿ. ಕೆಂಚಪ್ಪ ಗೌಡ ಹಾಗು ಹೇಮಾವತಿ ದಂಪತಿ ಪುತ್ರ ಚಂದ್ರಶೇಖರ್ ಎಮ್. ಕೆ ಇವರು, ಹೊರದೇಶದಲ್ಲಿರುವ(ಸೌದಿ ಅರೇಬಿಯಾ) ಅಲ್ಪಾನರ್ ಸೆರಾಮಿಕ್ಸ್ ಎಂಬ ಕಂಪನಿಯಲ್ಲಿ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಯಾವುದೋ ಹ್ಯಾಕರ್ ಗಳ ಸುಳಿಗೆ ಸಿಲುಕಿ ನಿರಪರಾಧಿಯಾಗಿ 2022ರ ನವೆಂಬರ್ ನಿಂದ ಬಂಧಿತರಾಗಿ ಜೈಲಿನಲ್ಲಿ ದಿನ ಕಳೆಯುವಂತೆ ಆಗಿದೆ. ಕುಟುಂಬದ ಪರವಾಗಿ ನಿಕಟ ವರ್ತಿ ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಹಾಗೂ ಮಂಗಳೂರಿನ ಎನ್ಇಸಿಎಫ್ ಕಾರ್ಯದರ್ಶಿ ಶಶಿಧರ ಶೆಟ್ಟಿ ಅವರು ಗುರುವಾರ ಮಂಗಳೂರಿನಲ್ಲಿ ಸುದ್ದಿಗಾರರಿಗೆ ಈ ಕುರಿತ ಮಾಹಿತಿ ನೀಡಿ ವಿವರಿಸಿದರು.
ಚಂದ್ರಶೇಖರ್ ಕಳೆದ ವರ್ಷ ಮೊಬೈಲ್ ಮತ್ತು ಸಿಮ್ ಖರೀದಿಗಾಗಿ ರಿಯಾದ್ನಲ್ಲಿರುವ ಮೊಬೈಲ್ ಅಂಗಡಿಯೊಂದಕ್ಕೆ ಸಿಮ್ ಖರೀದಿಸಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಚಂದ್ರಶೇಖರ್ ಅವರಿಂಧ 2 ಬಾರಿ ತಂಬನ್ನು ಪಡೆಯಲಾಗಿದೆ. ಒಂದು ವಾರದ ಬಳಿಕ ಆ ದೂರವಾಣಿ ಸಂಖ್ಯೆಗೆ ಅರೆಬೀಕ್ ಭಾಷೆಯಲ್ಲಿನ ಸಂದೇಶವೊಂದು ಬರುತ್ತದೆ.
ಈ ಸಂದೇಶವನ್ನು ಕ್ಲಿಕ್ ಮಾಡಿದ ಚಂದ್ರಶೇಖರ್ ಬಳಿ ಸಿಮ್ ಬಗೆಗಿನ ಮಾಹಿತಿ ಹಾಗೂ ಓಟಿಪಿ ಯನ್ನು ಕೇಳುತ್ತಾರೆ. ಓಟಿಪಿ ಹೇಳಿದ ಚಂದ್ರಶೇಖರ್ ಬಳಿಕ ತಮ್ಮ ಕೆಲಸಕ್ಕೆ ತೆರಳಿದ್ದಾರೆ. ಇದರ ಜತೆ ತಮ್ಮ ನಿಶ್ಚಿತಾರ್ಥ ಮತ್ತಿತರ ಕೆಲಸದಲ್ಲಿ ಮಗ್ನರಾಗಿದ್ದಾರೆ.ಹೀಗಿರುವಾಗ ಒಂದು ದಿನ ಇದ್ದಕ್ಕಿದಂತೆ ಯಾವುದೇ ಮಾಹಿತಿಯನ್ನು ನೀಡದೆ ಪೊಲೀಸ್ ಅಧೀಕ್ಷರೊಬ್ಬರು ಆದೇಶದ ಮೇರೆಗೆ ಚಂದ್ರಶೇಖರ್ ಅವರನ್ನು ಬಂಧಿಸಿದ್ದಾರೆ.ಇದ್ದಕ್ಕಿದ್ದಂತೆ ಈ ಘಟನೆ ಮನೆಯವರಿಗೆ ಬರಸಿಡಿಲು ಬಡಿದಂತಾಗಿದೆ.
ಚಂದ್ರಶೇಖರ್ ಅವರಿಗೆ ತಿಳಿಯದಂತೆ ಅಲ್ಲಿನ ಬ್ಯಾಂಕ್ ವೊಂದರಲ್ಲಿ ಅಕೌಂಟ್ ನ್ನು ಹ್ಯಾಕರ್ ಗಳು ತೆರೆದಿದ್ದಾರೆ. ಆ ದೇಶದ ಮಹಿಳೆಯೊಬ್ಬರ ಖಾತೆಯಿಂದ 22 ಸಾವಿರ ಚಂದ್ರಶೇಖರ್ ಖಾತೆಗೆ ಜಮೆಯಾಗಿದೆ. ಕೂಡಲೇ ಅದರಿಂದ ಬೇರೆ ಯಾವುದೋ ದೇಶಕ್ಕೆ ವರ್ಗಾವಣೆಯಾಗಿತ್ತು. ಹಣ ಕಳೆದುಕೊಂಡ ಮಹಿಳೆಯು ಚಂದ್ರಶೇಖರ್ ರವರ ಖಾತೆಗೆ ಜಮೆಯಾಗಿರುವುದನ್ನು ಗಮನಿಸಿ ಚಂದ್ರಶೇಖರ್ ಅವರ ಮೇಲೆ ದೂರನ್ನು ನೀಡಿದ್ದಾರೆ. ಹೀಗಾಗಿ ಅವರನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಈ ವಿಚಾರ ಆ ದೇಶದಲ್ಲಿದ್ದ ಚಂದ್ರಶೇಖರ್ ಅವರ ಸ್ನೇಹಿತರಿಂದ ತಿಳಿದು ಬಂದಿದೆ ಎಂದು ಚಂದ್ರಶೇಖರ್ ಅವರ ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಹ್ಯಾಕರ್ ಗಳ ಕಿರುಕುಳದಿಂದ ಚಂದ್ರಶೇಖರ್ ಅವರು ಜೈಲಿನಲ್ಲಿ ಇದೀಗ ಬಂಧಿಯಾಗಿದ್ದಾರೆ. ಮಗನ ಆಗಮನಕ್ಕಾಗಿ ತಾಯಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಅಲ್ಲದೆ ಮಗನನ್ನು ಬಿಡಿಸಿಕೊಳ್ಳಲು ಕಳೆದ 8 ತಿಂಗಳಿಂದ ಒದ್ದಾಡುತ್ತಿದ್ದಾರೆ. ಇತ್ತ ಚಂದ್ರಶೇಖರ್ ದುಡಿಯುತ್ತಿದ್ದ ರಿಯಾದ್ ಕಂಪನಿಯೂ ಈ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದೆ ಅನ್ಯಾಯ ಮಾಡಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಚಂದ್ರಶೇಖರ್ಗೆ ಜನವರಿಯಲ್ಲಿ ಊರಿನಲ್ಲಿ ಮದುವೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಮದುವೆಯ ದಿನಾಂಕವೂ ಅಂತಿಮವಾಗಿತ್ತು. ಈ ಸಿದ್ಧತೆಯಲ್ಲಿ ಇರುವಾಗಲೇ ಅವರ ಬಂಧನವಾಗಿದೆ. ಹ್ಯಾಕರ್ಗಳ ಕಿರುಕುಳದಿಂದ ಚಂದ್ರಶೇಖರ್ಗೆ ಅನ್ಯಾಯವಾಗಿದೆ. ಕಳೆದ 8 ತಿಂಗಳಿಂದ ಅವರ ಕುಟುಂಬ ನ್ಯಾಯಕ್ಕಾಗಿ ಕಾಯುತ್ತಿದೆ. ತಪ್ಪು ಮಾಡದೆ ಶಿಕ್ಷೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ಮೂಲಕ ಕೇಂದ್ರ ವಿದೇಶಾಂಗ ಸಚಿವಾಲಯದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಬಗ್ಗೆ ಜಿಲ್ಲೆಯ ಇತರ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ನಾಗರಿಕರು ಸೇರಿ ಕೇಂದ್ರ ಸರಕಾರಕ್ಕೆ ಒತ್ತಡ ಹಾಕುವಂತೆ ಮನವಿ ಮಾಡಲಾಗಿದೆ ಎಂದು ಚಂದ್ರಶೇಖರ್ ಅವರ ಕುಟುಂಬ ಹಾಗು ಎಂಡೋ ವಿರೋಧಿ ಹೋರಾಟ ಸಮಿತಿ ಕೊಕ್ಕಡ ಇದರ ಅಧ್ಯಕ್ಷರಾದ ಶ್ರೀಧರ್ ಗೌಡ.ಕೆ . ಹೇಳಿದ್ದಾರೆ.