ನ್ಯೂಸ್ ನಾಟೌಟ್: ಸೌಜನ್ಯ ಪ್ರಕರಣದ ನೈಜ ಆರೋಪಿಗಳ ಬಂಧನಕ್ಕೆ ಒತ್ತಾಯ ಹೆಚ್ಚುತ್ತಿದೆ. ಈ ನಡುವೆ ಸಿಬಿಐ ವಿಶೇಷ ನ್ಯಾಯಾಲಯ ಸಂತೋಷ್ ರಾವ್ ವಿಚಾರದಲ್ಲಿ ಕೊಟ್ಟ ಜಡ್ಜ್ ಮೆಂಟ್ ಪ್ರತಿಯಲ್ಲಿ ಏನಿದೆ..? ಸೌಜನ್ಯ ಅತ್ಯಾಚಾರದ ಬಗ್ಗೆ ಕೋರ್ಟ್ ಹೇಳಿದ್ದೇನು..? ಮುಂದೆ ತನಿಖೆ ನಡೆದ್ರೆ ಏನಾದರೂ ಪ್ರಯೋಜನ ಇದೆಯಾ..? ಸೌಜನ್ಯ ಹಂತಕರಿಗೆ ಶಿಕ್ಷೆಯಾಗುತ್ತಾ..? ಸೇರಿದಂತೆ ಜಡ್ಜ್ ಮೆಂಟ್ ಪ್ರತಿಯ ಇಂಚಿಂಚೂ ಮಾಹಿತಿಯನ್ನು ಖ್ಯಾತ ಹೈಕೋರ್ಟ್ ವಕೀಲ ಎಂ.ಆರ್.ಬಾಲಕೃಷ್ಣ ಮನಮುಟ್ಟುವಂತೆ ಮಾತನಾಡಿದ್ದಾರೆ.
ಕನ್ನಡ ಜನಪ್ರಿಯ ಯೂಟ್ಯೂಬ್ ವಾಹಿನಿಯಲ್ಲಿ ಮಾತನಾಡಿರುವ ಅವರು ಸೌಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಾರ್ಕಿಕ ಮಾಹಿತಿ ನೀಡಿದ್ದಾರೆ. ಸೌಜನ್ಯ ಪ್ರಕರಣದ ಬಗ್ಗೆ ಸಿಬಿಐ ಕೋರ್ಟ್ ಹೇಳಿದ್ದೇನು? ಅನ್ನುವುದನ್ನುಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಸಿಂಪಲ್ ಆಗಿ ವಿವರಿಸಿದ್ದಾರೆ. ಸಿಬಿಐ ವಿಶೇಷ ಕೋರ್ಟ್ ಸುದೀರ್ಘ ತನಿಖೆ ಬಳಿಕ ಹೇಳಿದ್ದೇನು? ಸಂತೋಷ್ ರಾವ್ ಅನ್ನು ನಿರಪರಾಧಿ ಅಂತ ತೀರ್ಪು ನೀಡಿದ್ದು ಏಕೆ? ಸೌಜನ್ಯ ಪ್ರಕರಣದಲ್ಲಿ ಪೊಲೀಸರು, ವೈದ್ಯರು ಮಾಡಿದ ತಪ್ಪೇನು..? ಕೇಸ್ ಅನ್ನು ಮುಚ್ಚಿ ಹಾಕಿದ್ರಾ..? ಇತ್ಯಾದಿ ಅಚ್ಚರಿಯ ಅಂಶಗಳತ್ತ ಬೆಳಕು ಚೆಲ್ಲಿದ್ದಾರೆ. ನ್ಯಾಯಾಲಯ ನೀಡಿರುವ ಜಡ್ಜ್ ಮೆಂಟ್ ಪ್ರತಿಯ ಸಂಪೂರ್ಣ ವಿವರ ಇಲ್ಲಿದೆ ಓದಿ…
ಒಂದಷ್ಟು ಮಂದಿ ಹೇಳುವ ಪ್ರಕಾರ ಸಂತೋಷ್ ರಾವ್ ನಿರ್ದೋಷಿ ಅಂತ ಕೋರ್ಟ್ ಹೇಳಿಲ್ಲ. ಆತನ ವಿರುದ್ಧ ಸಾಕ್ಷಿಗಳನ್ನು ಸರಿಯಾಗಿ ಪ್ರೊಡ್ಯೂಸ್ ಮಾಡಿಲ್ಲ, ಹೀಗಾಗಿ ಆತ ನಿರ್ದೋಷಿ ಎಂದು ಬಿಡುಗಡೆಯಾಗಿದ್ದಾನೆ ಎಂದು ಜಾಲತಾಣದಲ್ಲಿ ಹೇಳುತ್ತಿದ್ದಾರೆ. ಈ ಬಗ್ಗೆ ಜಡ್ಜ್ ಮೆಂಟ್ ಕಾಪಿಯಲ್ಲಿ ಏನಿದೆ..?
ಇದಕ್ಕೆ ಉತ್ತರಿಸಿದ ಹೈಕೋರ್ಟ್ ವಕೀಲ ಎಂ.ಆರ್.ಬಾಲಕೃಷ್ಣ , “ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಸಿಬಿಐ ನ್ಯಾಯಾಲಯ ಒಂದು ಐತಿಹಾಸಿಕ ತೀರ್ಪು ನೀಡಿದ್ದಾರೆ. ಈ ತೀರ್ಪಿನಲ್ಲಿ ಘನ ನ್ಯಾಯಾಧೀಶರು ಪ್ಯಾರಾ 142ರಲ್ಲಿ ಸಂತೋಷ್ ರಾವ್ಗೂ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ ಖಡಾಖಂಡಿತವಾಗಿ ಹೇಳಿದ್ದಾರೆ.
ಅದೇ ಪ್ಯಾರಾದಲ್ಲಿ ನ್ಯಾಯಮೂರ್ತಿಗಳು ಹೇಳಿರುವ ಪ್ರಕಾರ ಒಬ್ಬನೇ ವ್ಯಕ್ತಿ ಈ ಕೊಲೆಯನ್ನು ಮಾಡಿದ್ದಾನೆ ಅನ್ನುವುದನ್ನು ಹೇಳುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳನ್ನು ಪ್ರಾಸಿಕ್ಯೂಷನ್ ನವರು ಒದಗಿಸಿಲ್ಲ. ಮಾತ್ರವಲ್ಲ ಒಬ್ಬನೇ ವ್ಯಕ್ತಿ ಈ ಕೃತ್ಯವನ್ನು ಎಸಗುವುದಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಪ್ರಕರಣಕ್ಕೂ ಸಂತೋಷ್ ರಾವ್ ಗೂ ಯಾವುದೇ ಸಂಬಂಧವಿಲ್ಲ ಅನ್ನುವುದನ್ನು ನ್ಯಾಯಾಧೀಶರು ಹೇಳಿದ್ದಾರೆ” ಎಂದು ವಿವರಿಸಿದರು.
ಹಾಗೆ ಜಡ್ಜ್ ಮೆಂಟ್ ಪ್ರತಿಯ ಪ್ಯಾರಾ 143 ನಲ್ಲಿ ಮಾನ್ಯ ನ್ಯಾಯಾಧೀಶರು ಹೇಳಿರುವ ಅಂಶಗಳು ಹೆಚ್ಚು ಗಮನ ಸೆಳೆಯುತ್ತವೆ. ಪ್ರಾಸಿಕ್ಯೂಷನ್ ನವರು ಪ್ರಕರಣವನ್ನು ಸರಿಯಾಗಿ ನಡೆಸಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಗೋಲ್ಡನ್ ಅವರ್ ಅಂದರೆ ಪ್ರಾಥಮಿಕ ಹಂತದಲ್ಲಿ ತನಿಖೆಯನ್ನು ಸರಿಯಾಗಿ ಮಾಡಿಲ್ಲ ಎಂದು ಬಹಳ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ತನಿಖೆಯನ್ನು ಮಾಡುವುದು ಯಾರು..? ಮೊದಲು ಸ್ಥಳೀಯ ಪೊಲೀಸರು.
ಅಂದ್ರೆ ಲೋಕಲ್ ಪೊಲೀಸ್ ಏನಿದ್ದಾರೆ ಬೆಳ್ತಂಗಡಿ ಠಾಣೆಯವರು ಸರಿಯಾಗಿ ತನಿಖೆ ಮಾಡಿಲ್ಲ ಅಂತ ಕ್ಲೀಯರ್ ಕಟ್ ಆಗಿ ನ್ಯಾಯಾಧೀಶರು ಹೇಳಿದ್ದಾರೆ. ಪೊಲೀಸ್ ಅಧಿಕಾರಿಗಳ ನಂತರ ಈ ತನಿಖೆಯಲ್ಲಿ ಬಹಳ ಮುಖ್ಯ ಪಾತ್ರವಹಿಸುವವರು ವೈದ್ಯರು. ಅಪ್ರಾಪ್ತ ಬಾಲಕಿಯನ್ನು ಕಿಡ್ನಾಪ್ ಮಾಡಿ ರೇಪ್ ಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿ ಡಾಕ್ಟರ್ ಪಾತ್ರ ಮಹತ್ತರವಾಗಿರುತ್ತದೆ.
ಆದರೆ ಪೊಲೀಸರು ಯಾವ ರೀತಿಯಲ್ಲಿ ಸರಿಯಾಗಿ ತನಿಖೆ ಮಾಡಲಿಲ್ಲವೋ ಅದೇ ರೀತಿಯಲ್ಲಿ ವೈದ್ಯರು ಕೂಡ ಸೌಜನ್ಯಳ VAGINAL SWAB (ಗುಪ್ತಾಂಗದಿಂದ ಮಾದರಿ ಸಂಗ್ರಹ) ಅನ್ನು ಸಂಗ್ರಹ ಮಾಡಿಲ್ಲ. ಇದರಿಂದಾಗಿ ಪ್ರಕರಣದಲ್ಲಿ ಸಾಕ್ಷ್ಯನಾಶವಾಗಿದೆ ಎಂದು ಕೋರ್ಟ್ ನೇರವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಜಡ್ಜ್ ಮೆಂಟ್ ಕಾಪಿಯನ್ನು ಓದಿ ವಕೀಲರು ವಿವರಿಸಿದರು.
ಸಂಗ್ರಹಿಸಿದ VAGINAL SWAB ಅನ್ನು ಡ್ರೈ ಮಾಡಬೇಕು, ನಂತರ ಅದನ್ನು ಸಂರಕ್ಷಿಸಬೇಕು, ಅದನ್ನು ಸೀಲ್ ಮಾಡಬೇಕು. ಬಳಿಕ ಅದನ್ನು DNA ಟೆಸ್ಟ್ಗೆ ಕಳಿಸಬೇಕು. ಒಂದು ವೇಳೆ ಇದನ್ನೆಲ್ಲ ಸರಿಯಾಗಿ ಮಾಡಿದ್ದರೆ ಖಂಡಿತವಾಗಿ ಕೃತ್ಯ ಎಸಗಿದವರು ಸಿಕ್ಕಿ ಬೀಳುತ್ತಿದ್ದರು. ಹೇಗೆಂದರೆ ಪ್ರಾಥಮಿಕ ಹಂತದಲ್ಲಿ ಲೋಕಲ್ ಪೊಲೀಸ್ ನವರಿಗೆ ಬಂದ ದೂರಿನಲ್ಲಿ ಮನೆಯವರು ಮೇಲೆ ಕೆಲವು ವ್ಯಕ್ತಿಗಳ ಮೇಲೆ ಸಂಶಯ ವ್ಯಕ್ತಪಡಿಸಿರುತ್ತಾರೆ.
ಅಂತಹವರ ಮೊಬೈಲ್ ಅನ್ನುಮೊದಲು ಟ್ರೇಸ್ ಮಾಡಬಹುದಿತ್ತು. ಬಂಧಿಸಿ ವಿಚಾರಣೆ ನಡೆಸಬಹುದಿತ್ತು. ಯಾವ ಲೊಕೇಷನ್ ನಲ್ಲಿ ಅವರು ಇದ್ರು ಅನ್ನುವುದನ್ನು ಸಂಗ್ರಹಿಸಬಹುದಿತ್ತು. ಜೊತೆಗೆ ಸಿಸಿಟಿವಿ ಫೋಟೇಜ್ ಅನ್ನು ಕಲೆಕ್ಟ್ ಮಾಡಬೇಕಿತ್ತು. ಇನ್ನುಳಿದಂತೆ ಡಾಕ್ಟರ್ಸ್ ಸೌಜನ್ಯಳ VAGINAL SWAB ಮಾದರಿಯನ್ನು ಕರೆಕ್ಟ್ ಆಗಿ ಸಂಗ್ರಹಿಸಿದ್ರೆ ಖಂಡಿತವಾಗಿ ಈ ಕೇಸ್ ನಲ್ಲಿ ನಿಜವಾದ ಆರೋಪಿಗಳು ಬಲೆಗೆ ಬೀಳುತ್ತಿದ್ದರು.
ಸೌಜನ್ಯಳ VAGINAL SWAB ಮತ್ತು ಸಂತೋಷ್ ರಾವ್ ರಕ್ತದ ಜೊತೆ ಮ್ಯಾಚ್ ಮಾಡಿದ್ದರೆ ಅಂದೇ ಉತ್ತರ ಸಿಗುತ್ತಿತ್ತು. ಅದನ್ನು ಡಿಎನ್ಎ ಟೆಸ್ಟ್ ಗೆ ಒಳಪಡಿಸಿದ್ದರೆ ಸಂತೋಷ್ ರಾವ್ ಮಾಡಿದ್ದು ಹೌದಾ ಅಲ್ವೋ ಅನ್ನೋದು ಆರಂಭದಲ್ಲೇ ಗೊತ್ತಾಗುತ್ತಿತ್ತು. ಆದರೆ ಈ ಪ್ರಕರಣದಲ್ಲಿ ಹಾಗೆ ಆಗಿಯೇ ಇಲ್ಲ. VAGINAL SWAB ಸಂಗ್ರಹ ಸರಿಯಾಗಿ ಆಗದೆ ಇರುವ ಹಿನ್ನೆಲೆಯಲ್ಲಿ ಫಾರೆನ್ಸಿಕ್ ಸೈನ್ಸ್ ಲ್ಯಾಬೋರೆಟರಿಯವರಿಗೆ ಈ ಪ್ರಕರಣದಲ್ಲಿ ಸರಿಯಾದ ಫಲಿತಾಂಶವನ್ನು ನೀಡಲು ಸಾಧ್ಯವಾಗಿಲ್ಲ.
VAGINAL SWAB ಅನ್ನು ತಡವಾದ ನಂತರ ತೆಗೆಯಲು ಆಗಿಲ್ಲ. ಫಂಗಸ್ ಹಿಡಿದುಕೊಂಡಿತ್ತು. ಅದಕ್ಕೆ ಅದನ್ನು ಎಕ್ಸ್ ಪರ್ಟ್ ಗಳು ಕೋರ್ಟ್ ಮುಂದೆ ಬಂದು ಸರಿಯಾಗಿ ವರದಿ ನೀಡಲು ಸಾಧ್ಯವಾಗಿಲ್ಲ ಎಂದು ಬಾಲಕೃಷ್ಣ ತಿಳಿಸಿದ್ದಾರೆ. ಈ ಕೇಸ್ ನಲ್ಲಿ ಮುಖ್ಯವಾಗಿ ಸ್ಥಳೀಯ ಪೊಲೀಸರು ಹಾಗೂ ವೈದ್ಯಾಧಿಕಾರಿಗಳು ಕಂಪ್ಲೀಟ್ ಆಗಿ ಕೇಸ್ ಅನ್ನು ಹಾಳು ಮಾಡಿದ್ದಾರೆ ಅನ್ನುವುದು ಜಡ್ಜ್ ಮೆಂಟ್ ಕಾಪಿಯಲ್ಲಿ ತಿಳಿಸಲಾಗಿದೆ.
ಪ್ರಾಸಿಕ್ಯೋಷನ್ ಅವರು ಯಾವುದೇ ಸಾಕ್ಷಿಗಳನ್ನು ಸಂತೋಷ್ ರಾವ್ ಈ ಕೃತ್ಯ ಎಸಗಿದ್ದಾನೆಂದು ಹೇಳುವುದಕ್ಕೆ ಸಾಕ್ಷಿಗಳನ್ನು ನೀಡಿಲ್ಲ ಎಂದು ಪ್ಯಾರಾ 144 ನಲ್ಲೂ ನ್ಯಾಯಾಧೀಶರು ಹೇಳಿದ್ದಾರೆ. ಜಡ್ಜ್ ಮೆಂಟ್ ಕಾಪಿಯ ಜಿಸ್ಟ್ ನೋಡಿ ಹೇಳುವುದಾದರೆ ಯಾರನ್ನೋ ಬಚಾವ್ ಮಾಡುವುದಕ್ಕಾಗಿ ಪೊಲೀಸರು ಮತ್ತು ವೈದ್ಯಾಧಿಕಾರಿಗಳು ಇಂತಹ ಕೆಲಸ ಮಾಡಿದ್ದಾರೆ ಅನ್ನುವುದು ತಿಳಿದು ಬರುತ್ತಿದೆ ಎಂದು ಬಾಲಕೃಷ್ಣ ವಿವರಿಸಿದ್ದಾರೆ.
ತನಿಖೆ ಮುಂದೆ ನಡೆದು ದಿಕ್ಕು ತಪ್ಪಿಸಿದವರು ಇದ್ದರೆ ಅವರ ಮೇಲೆ ಕ್ರಮ ಸಾಧ್ಯಾನಾ..? ಜಡ್ಜ್ ಮೆಂಟ್ನ ಕೊನೆಯ ಪ್ಯಾರಾದಲ್ಲಿ ಹೇಳಿರುವ ಪ್ರಕಾರ ಕರ್ನಾಟಕದಲ್ಲಿ ಒಂದು ಎಕ್ಯುಟಲ್ ಕಮಿಟಿ ಅಂತ ಇದೆ. ಅದರ ಮುಂದೆ ಏನಾದರೂ ಈ ಪ್ರಕರಣದ ಅಂದಿನ ತನಿಖಾಧಿಕಾರಿಗಳು ಹಾಗೂ ವೈದ್ಯರನ್ನು ವಿಚಾರಣೆ ನಡೆಸಬೇಕು ಅನ್ನುವ ದೂರು ಹೋದರೆ ಅವರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳಬಹುದು. ಪೊಲೀಸರು, ವೈದ್ಯಾಧಿಕಾರಿಗಳನ್ನು ವಿಚಾರಣೆ ನಡೆಸುತ್ತಾರೆ. ಇದರಲ್ಲಿ ಏನಾದರೂ ಶಾಮೀಲಾಗಿದ್ದಾರೆ ಅನ್ನುವುದು ತಿಳಿದು ಬಂದರೆ ಅವರ ಮೇಲೆ ಕ್ರಮ ಜರುಗಿಸುವ ಅಧಿಕಾರ ಎಕ್ಯುಟಲ್ ಕಮಿಟಿಗೆ ಇದೆ.
ಬ್ರೈನ್ ಮ್ಯಾಪಿಂಗ್ ಗೆ ಯಾವುದೇ ಒಂದು ಕ್ರಿಮಿನಲ್ ಕೇಸಿನಲ್ಲಿ ಆರೋಪಿ ಒಪ್ಪಲೇಬೇಕು ಅಂತ ಏನು ಇಲ್ಲ. ಆತನನ್ನು ಬಲವಂತವಾಗಿ ಫೋರ್ಸ್ ಫುಲ್ ಆಗಿ ಮಾಡುವಂತಿಲ್ಲ. ಒಂದು ವೇಳೆ ಬ್ರೈನ್ ಮ್ಯಾಪಿಂಗ್ ಅಥವಾ ನಾರ್ಕೊ ಅನಾಲಿಸಿಸ್ ಟೆಸ್ಟ್ ಮಾಡಿದ್ರು ಅದರ ಆಧಾರದಲ್ಲಿ ಶಿಕ್ಷೆ ವಿಧಿಸುವುದಕ್ಕೆ ಆಗುವುದಿಲ್ಲ. ಅವನ ಒಪ್ಪಿಗೆ ಕೊಟ್ರೆ ಮಾತ್ರ ಬ್ರೈನ್ ಮ್ಯಾಪಿಂಗ್ ಮಾಡೋಕೆ ಆಗುತ್ತೆ.
ಸದ್ಯ ಜನ ಪುನರ್ ತನಿಖೆ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಇದನ್ನು ಪುನರ್ ತನಿಖೆ ಮಾಡಬೇಕೆಂಬ ಒತ್ತಾಯ ಇದೆ. ಯಾವುದೇ ಒಂದು ಕ್ರಿಮಿನಲ್ ಪ್ರಕರಣ ಪುನರ್ ತನಿಖೆ ಮಾಡುವ ಪವರ್ ಇರುವುದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗೆ ಮಾತ್ರ. ಸಾಂವಿಧಾನಿಕ ಕೋರ್ಟ್ ನಲ್ಲಿ ಸೆಕ್ಷನ್ ಕ್ರಿಮಿನಲ್ ಪಿಟಿಷನ್ ಸೆಕ್ಷನ್ 482 ಕೆಳಗಡೆ ಅ 226 ಸಬ್ ಕ್ಲಾಸ್ 1 ಅಡಿಯಲ್ಲಿ ಅರ್ಜಿ ಹಾಕಿ ಮರು ತನಿಖೆ ನಡೆಸಬೇಕೆಂದು ಸಿಬಿಐಗೆ ನಿರ್ದೇಶನ ಕೊಡಿ ಎಂದು ಅರ್ಜಿಯನ್ನು ಹಾಕಲು ಅವಶ್ಯಕತೆ ಇದೆ. ಅಥವಾ ನೇರವಾಗಿ ಸೌಜನ್ಯ ಕುಟುಂಬದವರು ಅಥವಾ ಸಂತೋಷ್ ಕುಟುಂಬದವರಾಗಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇದೆ.
ಮರು ತನಿಖೆ ವಿಷಯಕ್ಕೆ ಬಂದ್ರೆ ಈ ಹಿಂದೆ ನಡೆದ ತನಿಖೆ ಹಾಗೂ ಚಾರ್ಜ್ ಶೀಟ್ ಗಳು ನಗಣ್ಯವಾಗುತ್ತದೆ. ಹೊಸದಾಗಿ ತನಿಖೆ ನಡೆಯುತ್ತದೆ. ಮರು ತನಿಖೆ ಆದರೂ ದೊಡ್ಡ ಮಟ್ಟದ ಯಶಸ್ಸು ಸಿಗುವುದಿಲ್ಲ ಎಂದು ಅನಿಸುತ್ತದೆ. ಏಕೆಂದರೆ ಸೂಕ್ಷ್ಮ ಸಾಕ್ಷ್ಯಾಧಾರಗಳು ನಾಶ ಆಗಿ ಹೋಗಿದೆ. ಮುಂದೆ ಸಿಬಿಐ ಮನಸ್ಸು ಮಾಡಿದ್ರೆ ಟೆಕ್ನಿಕಲ್ ಸಾಕ್ಷಿಗಳಿಂದ ಅಪರಾಧಿಗಳನ್ನು ಹಿಡಿಯುವುದಕ್ಕೆ ಅವಕಾಶ ಇದೆ.