ನ್ಯೂಸ್ ನಾಟೌಟ್: ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಆಹಾರ ತುಂಬಾ ರುಚಿಕರ ಜತೆಗೆ ಆರೋಗ್ಯಕರವೂ ಕೂಡ.ಹೀಗಾಗಿ ಹಿಂದಿನ ಕಾಲದ ಜನರಿಗೆ ಕಾಯಿಲೆಗಳು ಕೂಡ ಕಡಿಮೆಯಿದ್ದವು.ಆದರೆ ಆಧುನಿಕ ಯುಗದಲ್ಲಿ ಮೂಲೆ ಗುಂಪಾಗಿದ್ದ ಮಣ್ಣಿನ ಪಾತ್ರೆಗಳಿಗೆ ಇದೀಗ ಮತ್ತೆ ಬೇಡಿಕೆ ಬರಲಾರಂಭಿಸಿದೆ. ಕುಂಬಾರಿಕೆ ಕಾಯಕದಿಂದ ದೂರ ಸರಿಯುತ್ತಿರುವ ಯುವ ಪೀಳಿಗೆಯನ್ನು ಮತ್ತೆ ಕುಂಬಾರಿಕೆಗೆ ಸೆಳೆಯಲು ಕುಂಬಾರಿಕೆಯಲ್ಲಿ ಆಧುನಿಕ ಯಂತ್ರಗಳನ್ನು ಪರಿಚಯಿಸಲಾಗುತ್ತಿದೆ.
ಹೌದು, ಮಣ್ಣಿನ ಮಡಿಕೆಗಳು ಅಂದ್ರೆ ಅದು ಬೇಗನೆ ಒಡೆದುಕೊಳ್ಳುತ್ತದೆ.ಅದರ ನಿರ್ವಹಣೆ ಕಷ್ಟ ಈ ತರಹದ ಭಾವನೆಯಿತ್ತು. ಆದರೆ ಪ್ಲ್ಯಾಸ್ಟಿಕ್, ಸ್ಟೀಲ್ , ಲೋಹ,ನಾನ್ ಸ್ಟಿಕ್ ಪಾತ್ರೆಗಳಿಗೆ ಮರುಳಾದವರು ಇದೀಗ ನಿಧಾನವಾಗಿ ಮಣ್ಣಿನ ಮಡಿಕೆಗಳತ್ತ ಒಲವು ತೋರುತ್ತಿದ್ದಾರೆ.
ಒಂದು ಸಮಯದಲ್ಲಿ ಮಣ್ಣಿನ ಮಡಿಕೆಗಳು ಹಾಗೂ ಕುಂಬಾರಿಕೆ ವೃತ್ತಿಯೇ ಮಾಯವಾಗುತ್ತದೆ ಎನ್ನುವ ಆತಂಕದಲ್ಲಿದ್ದ ಪರಿಸ್ಥಿತಿ ಇಂದು ಮತ್ತೆ ತಿಳಿಯಾಗಿದೆ.ಸಾಂಪ್ರದಾಯಿಕ ರೀತಿಯಲ್ಲಿ ನಡೆಯುತ್ತಿದ್ದ ಕುಂಬಾರಿಕೆಗೆ ಆಧುನಿಕ ಯಂತ್ರಗಳ ಪರಿಚಯವಾದ ಬಳಿಕ ಸ್ಟೀಲ್ ಹಾಗೂ ಇತರ ಲೋಹಗಳಿಂದ ತಯಾರಾದ ಪಾತ್ರೆಗಳಿಗೆ ಸರಿಸಾಟಿಯಾಗಿ ಮಣ್ಣಿನ ಮಡಿಕೆಗಳನ್ನೂ ತಯಾರಿಸಲಾಗುತ್ತಿದೆ. ಮಣ್ಣನ್ನು ಬಳಸಿ ಅಡುಗೆ ಪಾತ್ರೆಗಳ ಜೊತೆಗೆ ಹಲವು ರೀತಿಯ ಅಲಂಕಾರಿಕ ವಸ್ತುಗಳೂ ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇವುಗಳಲ್ಲಿ ಅಡುಗೆ ಪಾತ್ರೆಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ.
ಸ್ಟೀಲ್ ಹಾಗೂ ಇತರ ಲೋಹಗಳಿಂದ ತಯಾರಿಸಲಾಗುತ್ತಿದ್ದ ಪಾತ್ರೆಗಳ ಸ್ಥಾನವನ್ನು ಇಂದು ಹಲವು ಮನೆಗಳಲ್ಲಿ ಮಣ್ಣಿನ ಪಾತ್ರೆಗಳೇ ತುಂಬುತ್ತಿವೆ ಅನ್ನೋದು ವಿಶೇಷ.. ಈ ಹಿಂದೆ ಮಾನವಶಕ್ತಿಯನ್ನು ಬಳಸಿ ತಯಾರಿಸಲಾಗುತ್ತಿದ್ದ ಮಣ್ಣಿನ ಪಾತ್ರೆಗಳು, ಇಂದು ಆಧುನಿಕ ಯಂತ್ರಗಳನ್ನು ಬಳಸಿ ತಯಾರಿಸಲಾಗುತ್ತಿದೆ. ದಿನಕ್ಕೆ 30 ಮಡಿಕೆಗಳನ್ನು ಮಾಡುತ್ತಿದ್ದ ಕುಂಬಾರರು ಇಂದು ಪವರ್ ಮಿಷನ್ಗಳನ್ನು ಬಳಸಿಕೊಂಡು ದಿನಕ್ಕೆ 100 ಕ್ಕೂ ಹೆಚ್ಚಿನ ಮಡಿಕೆಗಳನ್ನು ತಯಾರಿಸುವ ಹಂತಕ್ಕೆ ತಲುಪಿದ್ದಾರೆ ಅಂದರೆ ಅದರ ಬೇಡಿಕೆ ಇಮ್ಮಡಿಯಾಗಿದೆ ಅಂತಲೇ ಅರ್ಥ.
ಸದ್ಯ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಪುತ್ತೂರು ಕುಂಬಾರರ ಸೊಸೈಟಿ ಕುಲವೃತ್ತಿಯಿಂದ ದೂರ ಸರಿದ ಯುವಕರನ್ನು ಮತ್ತೆ ಕುಲವೃತ್ತಿಯತ್ತ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ.ಈ ಮೂಲಕ ಕುಂಬಾರಿಕೆ ವೃತ್ತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ.ಎಂ.ಆರ್.ಪಿ.ಎಲ್ ನಂತಹ ಸಂಸ್ಥೆಗಳು, ಆಧುನಿಕ ಯಂತ್ರಗಳು ಮತ್ತು ಉಪಕರಣಗಳನ್ನು ನೀಡುವ ಕಾರ್ಯವೂ ನಡೆಯುತ್ತಿದೆ.
ಕೊರೊನಾ ಬಂದ ಮೇಲಂತು ಇನ್ನು ಬೇಡಿಕೆ ಜಾಸ್ತಿಯಾಗಿದೆ. ಹಳ್ಳಿಗಿಂತಲೂ ನಗರದ ಜನ ಈ ವಸ್ತುಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಅದರಲ್ಲಿಯೂ ದಕ್ಷಿಣ ಕನ್ನಡದಲ್ಲಿ ಮೀನು ಮಾಂಸದ ಅಡುಗೆಗೆ ಮಣ್ಣಿನ ಪಾತ್ರೆಯೇ ಉತ್ತಮ. ಹಾಗಾಗಿ ಬೇಡಿಕೆ ಹೆಚ್ಚಿದೆ. ಇಲ್ಲಿ ಆರೋಗ್ಯ ಹಾಗೂ ರುಚಿ ಎರಡನ್ನೂ ನಾವು ಕಾಯ್ದುಕೊಳ್ಳಬಹುದು.ಒಟ್ಟಿನಲ್ಲಿ ಲೋಹಗಳ ಪಾತ್ರೆಗಳು ಮಾಯವಾಗಿ ಮುಂದಿನ ದಿನಗಳಲ್ಲಿ ಪ್ರತೀ ಅಡುಗೆಮನೆಯಲ್ಲಿ ಮಣ್ಣಿನ ಪಾತ್ರೆಗಳು ಕಂಡು ಬರುವ ಎಲ್ಲಾ ಲಕ್ಷಣಗಳೂ ಕಂಡು ಬರುತ್ತಿದೆ.