ನ್ಯೂಸ್ ನಾಟೌಟ್ : ಇತ್ತೀಚೆಗಷ್ಟೇ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಭಾರತಕ್ಕೆ ಬಂದಿರುವ ಸುದ್ದಿ ಹರಿದಾಡಿರುವ ಬಗ್ಗೆ ನಿಮ್ಗೆ ಗೊತ್ತಿದೆ. ಇದೀಗ ಉಜ್ಬೇಕಿಸ್ತಾನ ಮೂಲದ ಮಹಿಳೆಯೊಬ್ಬಳು ನೇಪಾಳದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ್ದು, ಉತ್ತರ ಪ್ರದೇಶದ ಮಹಾರಾಜಗಂಜ್ ಪೊಲೀಸರು ಆಕೆಯನ್ನು ಬಂಧಿಸಿರುವ ಘಟನೆ ವರದಿಯಾಗಿದೆ.
ನೇಪಾಳದ ಸೋನೌಲಿ ಗಡಿಯಿಂದ ಉಜ್ಬೇಕಿಸ್ತಾನ ಮೂಲದ ಮಹಿಳೆಯೊಬ್ಬಳು ಅಕ್ರಮವಾಗಿ ಭಾರತವನ್ನು ಪ್ರವೇಶ ಮಾಡಿದ್ದಾಳೆ. ಆಕೆಯನ್ನು ಸಶಸ್ತ್ರ ಸೀಮಾ ಬಲ (ಎಸ್ಎಸ್ಬಿ) ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಗುರುತಿನ ಆಧಾರ್ ಕಾರ್ಡ್ ತೋರಿಸಿದ್ದು ಈ ಬಗ್ಗೆ ಅನುಮಾನಗೊಂಡ ಪೊಲೀಸರು ಪರಿಶೀಲಿಸಿದಾಗ ಅದು ನಕಲಿ ಎಂದು ಗೊತ್ತಾಗಿದೆ.ಕೂಡಲೇ ಆಕೆಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ದಿಲ್ಬರ್ ರಾಖಿಮೋವಾ ಬಂಧಿತ ಮಹಿಳೆ ಎಂದು ಗುರುತಿಸಲಾಗಿದೆ.
ವಿಚಾರಣೆ ವೇಳೆ ಮಹಿಳೆ ತಾನು ಉಜ್ಬೇಕಿಸ್ತಾನದಿಂದ ಬಂದಿರುವುದಾಗಿ ತಿಳಿಸಿದ್ದಾಳೆ. ಕೂಲಂಕುಷವಾಗಿ ತನಿಖೆ ನಡೆಸಿದಾಗ ಆಕೆಯ ಪಾಸ್ಪೋರ್ಟ್ ಮತ್ತು ವೀಸಾ ಮಾನ್ಯವಾಗಿದ್ದರೂ ಆಧಾರ್ ಕಾರ್ಡ್ನಲ್ಲಿರುವ ಮಾಹಿತಿ ಹೊಂದಿಕೆಯಾಗುತ್ತಿಲ್ಲ ಎಂದು ತಿಳಿದುಬಂದಿದೆ. ಸೋನೌಲಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಆಕೆ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ್ದು ಏಕೆ ಎಂಬುದರ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಪೊಲೀಸ್ ತನಿಖೆ ಮುಂದುವರಿದಿದೆ.
ಪಬ್ಜಿ ಆಡುವಾಗ ಭಾರತೀಯ ಮೂಲದ ಸಚಿನ್ ಮೀನ ಪರಿಚಯವಾಗಿ ಪರಿಚಯ ಪ್ರೇಮಕ್ಕೆ ತಿರುಗಿದ ಬಳಿಕ ಪಾಕಿಸ್ತಾನದ ಸೀಮಾ ಹೈದರ್ ಎಂಬ ಮಹಿಳೆ ತನ್ನ ನಾಲ್ಕು ಮಕ್ಕಳೊಂದಿಗೆ ಆತನನ್ನು ಭೇಟಿಯಾಗಲು ನೇಪಾಳಕ್ಕೆ ಆಗಮಿಸಿದ್ದಳು. ಅಲ್ಲಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಸೀಮಾ ಹೈದರ್ ಇಂದಿಗೂ ಉತ್ತರ ಪ್ರದೇಶದ ನೋಯ್ಡಾದಲ್ಲಿ ನೆಲೆಸಿದ್ದಾಳೆ. ಈ ಪ್ರಕರಣ ಇಡೀ ದೇಶದಲ್ಲಿ ಚರ್ಚೆಯಾಗಿದ್ದು,ಇಂದಿಗೂ ಚರ್ಚೆ ಆಗುತ್ತಲೇ ಇದೆ. ಈ ಪ್ರಕರಣ ಜೀವಂತವಾಗಿ ಇರುವಾಗಲೇ ಅದೇ ರೀತಿಯ ಮತ್ತೊಂದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ.