ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯಲ್ಲಿ ಬುಧವಾರ ತಡರಾತ್ರಿ ಭಾರಿ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ. ಹಾರ್ಡ್ ವೇರ್ ಮಳಿಗೆಗೆ ನುಗ್ಗಿದ ಕಳ್ಳರು 30 ಲಕ್ಷ ರೂ. ಮೌಲ್ಯದ ವಸ್ತುಗಳು, 2 ಲಕ್ಷ ರೂ. ನಗದು ಜೊತೆಗೆ cctv ಡಿವಿಯರ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಇದೀಗ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ನೆಲ್ಯಾಡಿಯ ಕೆಜೆಕೆ ಟವರ್ಸ್ ನಲ್ಲಿರುವ ಜಗದಾಂಬಾ ಏಜೆನ್ಸಿಸ್ ಎಲೆಕ್ಟ್ರಿಕಲ್ ಅಂಡ್ ಫ್ಲಂಬಿಂಗ್ ಹಾರ್ಡ್ವೇರ್ ಮಳಿಗೆಗೆ ಆ.17ರಂದು ತಡರಾತ್ರಿ ಕಳ್ಳರು ನುಗ್ಗಿದ್ದಾರೆ. ಕ್ಯಾಶ್ ಬಾಕ್ಸ್ ನಲ್ಲಿದ್ದ 2 ಲಕ್ಷ ರೂ. ಕದ್ದಿದ್ದಾರೆ. ನಂತರ ಸುಮಾರು 30 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ನ್ಯೂಸ್ ನಾಟೌಟ್ ಗೆ ಸಂಸ್ಥೆಯ ಮಾಲೀಕ ಮನೋಹರ್ ಸಿಂಗ್ ತಿಳಿಸಿದ್ದಾರೆ.
ಈ ಬಗ್ಗೆ ನ್ಯೂಸ್ ನಾಟೌಟ್ ಜೊತೆಗೆ ಮಾತನಾಡಿದ ಮನೋಹರ್ ಸಿಂಗ್, ‘ಮೂಲತಃ ನಾವು ರಾಜಸ್ಥಾನದವರು. ಕಳೆದ ಕೆಲವು ವರ್ಷಗಳಿಂದ ನಾವು ನೆಲ್ಯಾಡಿಯಲ್ಲಿ ಶಾಪ್ ತೆರೆದಿದ್ದೇವೆ. ನಿನ್ನೆ ದಿನ ನಾನು ನಮ್ಮ ಊರು ರಾಜಸ್ಥಾನಕ್ಕೆ ಹೊರಟಿದ್ದೆ. ಕಾರವಾರಕ್ಕೆ ತಲುಪಿದ್ದಾಗ ಕಳ್ಳತನ ನಡೆದಿದೆ ಅನ್ನುವ ವಿಚಾರ ತಿಳಿಯಿತು. ಹೀಗಾಗಿ ಪ್ರಯಾಣವನ್ನು ಅರ್ಧದಲ್ಲಿ ಮೊಟಕುಗೊಳಿಸಿ ಮತ್ತೆ ನೆಲ್ಯಾಡಿಯತ್ತ ಟ್ಯಾಕ್ಸಿ ಮಾಡಿಕೊಂಡು ಬರುತ್ತಿದ್ದೇನೆ, ಅಂದಾಜು ಮೊತ್ತ 30 ಲಕ್ಷ ರೂ. ಮೌಲ್ಯದ ವಸ್ತುಗಳು ಕಳ್ಳತನ ಆಗಿದೆ ಎಂದು ನನಗೆ ನನ್ನ ಹುಡುಗರು ತಿಳಿಸಿದ್ದಾರೆ. ಕ್ಯಾಶ್ ಕೂಡ ತೆಗೆದುಕೊಂಡು ಹೋಗಿದ್ದಾರೆ. ಪೊಲೀಸರು ಬಂದಿದ್ದಾರೆ. ತನಿಖೆ ನಡೆಯುತ್ತಿದೆ. ಆದರೆ ಸಿಸಿಟಿವಿ ಡಿವಿಯರ್ ತೆಗೆದುಕೊಂಡು ಹೋಗಿರುವುದರಿಂದ ಅಪರಾಧಿಗಳನ್ನು ಹಿಡಿಯುವುದು ತುಸು ಸವಾಲಾಗಬಹುದು. ಆದಷ್ಟು ಬೇಗ ಕಳ್ಳರನ್ನು ಬಂಧಿಸಬೇಕು ಎಂದು ತಿಳಿಸಿದರು.
ಈ ಬಗ್ಗೆ ನ್ಯೂಸ್ ನಾಟೌಟ್ ಜೊತೆಗೆ ಮಾತನಾಡಿದ ಸಂಸ್ಥೆಯ ಕೆಲಸಗಾರ ಸಚಿನ್, ಕಳ್ಳರು ಕಾದು ಕೃತ್ಯವನ್ನು ಎಸಗಿದ್ದಾರೆ. ತಡರಾತ್ರಿ ೧೨ ಗಂಟೆ ತನಕ ಏನೂ ಆಗಿರಲಿಲ್ಲ. ಒಂದು ಗಂಟೆಯ ಸಮೀಪದಲ್ಲಿ ಕಳ್ಳರು ಕೃತ್ಯ ಎಸಗಿರಬಹುದು ಎಂದು ತಿಳಿಸಿದ್ದಾರೆ.