ನ್ಯೂಸ್ ನಾಟೌಟ್: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಥಾತ್ರಿ ಪ್ರದೇಶದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ವೇಳೆ ಗುಲಾಂ ನಬಿ ಆಜಾದ್ ನೀಡಿದ ಹೇಳಿಕೆಯೊಂದು ಭಾರಿ ವೈರಲ್ ಆಗಿದೆ. ಕಾಂಗ್ರೆಸ್ ಮಾಜಿ ನಾಯಕನ ಹೇಳಿಕೆಯ ವಿಡಿಯೋ ವೈರಲ್ ಆಗಿದೆ.
600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಮುಸಲ್ಮಾನನೂ ಇರಲಿಲ್ಲ ಮತ್ತು ಹೆಚ್ಚಿನ ಕಾಶ್ಮೀರಿ ಪಂಡಿತರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದೂ ಗುಲಾಂ ನಬಿ ಆಜಾದ್ ಹೇಳಿದರು. “ಎಲ್ಲರೂ ಹಿಂದೂ ಧರ್ಮದಲ್ಲಿ ಜನಿಸಿದರು” ಎಂದು ಅವರು ಹೇಳಿದರು. ಅಲ್ಲದೆ, ನಾವೆಲ್ಲರೂ ಒಟ್ಟಾಗಿ ಹಿಂದೂ, ಮುಸ್ಲಿಂ, ರಜಪೂತ, ದಲಿತ, ಕಾಶ್ಮೀರಿ, ಗುಜ್ಜರ್, ಎಲ್ಲರೂ ಒಗ್ಗೂಡಿ ಇದನ್ನು ನಮ್ಮ ಮನೆಯಾಗಿಸಬೇಕು ಎಂದೂ ಗುಲಾಂ ನಬಿ ಆಜಾದ್ ಹೇಳಿದರು.
“ಹಿಂದೂ ಧರ್ಮ ಅತ್ಯಂತ ಪುರಾತನ ಧರ್ಮ. ಕೇವಲ 10-20 ಮುಸ್ಲಿಮರು ಮೊಘಲ್ ಸೈನ್ಯದ ಭಾಗವಾಗಿ ಭಾರತಕ್ಕೆ ಬಂದರು, ಉಳಿದವರೆಲ್ಲ ಮತಾಂತರಗೊಂಡರು’’ ಎಂದೂ ಕಾಂಗ್ರೆಸ್ ಮಾಜಿ ನಾಯಕರು ಹೇಳಿದರು.
“ಇದು ನಮ್ಮ ಮನೆ, ಯಾರೂ ಹೊರಗಿನಿಂದ ಬಂದಿಲ್ಲ. ನಾವೆಲ್ಲರೂ ಈ ಮಣ್ಣಿನಲ್ಲಿ ಹುಟ್ಟಿದ್ದೇವೆ ಮತ್ತು ಇಲ್ಲಿಯೇ ಸಾಯುತ್ತೇವೆ ಎಂದೂ ಗುಲಾಂ ನಬಿ ಆಜಾದ್ ಹೇಳಿದ್ದಾರೆ. “ನಾನು ಸಂಸತ್ತಿನಲ್ಲಿ ಬಹಳಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದೇನೆ ಅದು ನಿಮಗೆ ತಲುಪಲಿಲ್ಲ. ಕೆಲವರು ಹೊರಗಿನಿಂದ ಬಂದವರು ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದು, ನಾನು ಒಳಗಿನಿಂದ ಅಥವಾ ಹೊರಗಿನಿಂದ ಬಂದಿಲ್ಲ ಎಂದು ಹೇಳಿದೆ. ಭಾರತದಲ್ಲಿ, ಜಗತ್ತಿನಲ್ಲಿ ಇಸ್ಲಾಂ ಧರ್ಮವು 1500 ವರ್ಷಗಳ ಹಿಂದೆ ಬಂದಿತು, ಹಿಂದೂ ಧರ್ಮವು ತುಂಬಾ ಪುರಾತನವಾದುದು’’ ಎಂದೂ ಹೇಳಿದ್ದಾರೆ.
ಕಾಂಗ್ರೆಸ್ನಲ್ಲಿ ಸುಮಾರು ಐದು ದಶಕಗಳನ್ನು ಕಳೆದ ನಂತರ, 73 ವರ್ಷದ ಗುಲಾಂ ನಬಿ ಆಜಾದ್ ಕಳೆದ ವರ್ಷ ಸೆಪ್ಟೆಂಬರ್ 26 ರಂದು ತಮ್ಮದೇ ಆದ ಡೆಮಾಕ್ರಟಿಕ್ ಆಜಾದ್ ಪಕ್ಷವನ್ನು ಪ್ರಾರಂಭಿಸಿದರು. ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ನಂತರ, ಹಿರಿಯ ರಾಜಕಾರಣಿ ಕಾಂಗ್ರೆಸ್ ನಾಯಕತ್ವವನ್ನು ಟೀಕಿಸುತ್ತಿದ್ದಾರೆ.