ನ್ಯೂಸ್ ನಾಟೌಟ್: ಶೌಚಾಲಯದ ತ್ಯಾಜ್ಯವನ್ನು ಕೇರಳದಿಂದ ತಂದು ಕರ್ನಾಟಕದಲ್ಲಿ ಸುರಿಯುತ್ತಿರುವ ದಂಧೆ ನಡೆಯುತ್ತಿದೆ. ಇಂತಹ ದಂಧೆಯನ್ನು ಕರ್ನಾಟಕದ ವಾಹನವನ್ನು ಬಳಸಿಕೊಂಡೇ ಮಾಡುತ್ತಿರುವುದು ವಿಶೇಷವಾಗಿದೆ. ಶೌಚಾಲಯದ ತ್ಯಾಜ್ಯವನ್ನು ಟ್ಯಾಂಕ್ ಗೆ ತುಂಬಿ ಸುರಿಯಲು ಹೋಗುತ್ತಿದ್ದ ಸಂದರ್ಭದಲ್ಲಿ ಸಾರ್ವಜನಿಕರು ವಾಹನವನ್ನು ತಡೆದು ಚಾಲಕನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಟ್ವಾಳ ತಾಲೂಕಿನ ಉಕ್ಕುಡದಲ್ಲಿ ಶೌಚಾಲಯದ ಲಾರಿ ಹೋಗುತ್ತಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ವಾಹನವನ್ನು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಸತ್ಯಾಂಶ ಬೆಳಕಿಗೆ ಬಂದಿದೆ. ಸಾರಡ್ಕ ಚೆಕ್ ಪೋಸ್ಟ್ ಬಳಿ ತಲುಪುವಾಗ ವಾಹನವನ್ನ ಸಾರ್ವಜನಿಕರು ಬೆನ್ನಟ್ಟಿದ್ದಾರೆ. ಟ್ಯಾಂಕರ್ ಚಾಲಕನನ್ನು ವಿಟ್ಲ ಪೊಲೀಸರಿಗೆ ಒಪ್ಪಿಸಲಾಗಿದೆ. ಶೌಚಾಲಯದ ತ್ಯಾಜ್ಯ ರಸ್ತೆಯುದ್ದಕ್ಕೂ ಸೋರಿಕೆಯಾಗಿರುವದರಿಂದ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲ ಬೆಳವಣಿಗೆಗೆ ವಿಟ್ಲ ಪೊಲೀಸರ ಕೈವಾಡ ಅನ್ನೋ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಕೆಲ ದಿನಗಳ ಹಿಂದೆ ಶೌಚಾಲಯದ ತ್ಯಾಜ್ಯವನ್ನ ವಿಟ್ಲ ಪರಿಸರದಲ್ಲಿ ಸುರಿಯಲಾಗಿತ್ತು. ವಿಟ್ಲದ ಕೇಪು ಚೆಲ್ಲಡ್ಕದಲ್ಲಿ ಪರಿಸರದಲ್ಲಿ ಸುರಿದು ರಾದ್ಧಾಂತಕ್ಕೆ ಕಾರಣವಾಗಿತ್ತು. ಈ ವೇಳೆ ಸಾರ್ವಜನಿಕರು ವಾಹನವನ್ನ ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸಿದ್ದರು. ಕೆಲವೇ ದಿನಗಳಲ್ಲಿ ವಾಹನವನ್ನು ಬಿಡಿಸಿಕೊಂಡು ಬಂದು ಇದೀಗ ಮತ್ತೆ ದುಷ್ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.