ನ್ಯೂಸ್ ನಾಟೌಟ್: ಸರ್ಕಾರಿ ನೌಕರರೊಬ್ಬರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ₹ 82 ಲಕ್ಷ ಸುಲಿಗೆ ಮಾಡಿದ್ದ ಆರೋಪದಡಿ ಕೊಡಗಿನ ಮಹಿಳೆ ಸೇರಿದಂತೆ ಮೂವರನ್ನು ಬೆಂಗಳೂರಿನ ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಕೊಡಗು ಜಿಲ್ಲೆಯ ಅಣ್ಣಮ್ಮ, ಲೋಕೇಶ್ ಹಾಗೂ ಸ್ನೇಹಾ ಬಂಧಿತರು. ಮೂವರು ವ್ಯವಸ್ಥಿತ ಸಂಚು ರೂಪಿಸಿ ಸರ್ಕಾರಿ ನೌಕರರೊಬ್ಬರನ್ನು ಸುಲಿಗೆ ಮಾಡಿದ್ದರು. ನೌಕರ ನೀಡಿದ್ದ ದೂರು ಆಧರಿಸಿ ಮೂವರನ್ನೂ ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಆರೋಪಿಗಳು, ಬೊಮ್ಮನಹಳ್ಳಿ ಬಳಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಸರ್ಕಾರಿ ನೌಕರ ಮಾತ್ರವಲ್ಲದೇ ಹಲವರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಹಣ ಸುಲಿಗೆ ಮಾಡಿರುವ ಮಾಹಿತಿ ಇದೆ’ ಎಂದು ತಿಳಿಸಿವೆ.
ಸರ್ಕಾರಿ ನೌಕರ ಎಂಬುದನ್ನು ತಿಳಿದುಕೊಂಡಿದ್ದ ಆರೋಪಿ ಅಣ್ಣಮ್ಮ, ದೂರುದಾರರನ್ನು ಪರಿಚಯ ಮಾಡಿಕೊಂಡಿದ್ದರು. ‘ನನ್ನ ಮಗುವಿಗೆ ಹುಷಾರಿಲ್ಲ. ಹಣದ ಸಹಾಯ ಮಾಡಿ’ ಎಂದು ಕೇಳಿದ್ದಳು. ಅದನ್ನು ನಂಬಿದ್ದ ದೂರುದಾರ, ಆರಂಭದಲ್ಲಿ ₹ 5,000 ಸಹಾಯ ಮಾಡಿದ್ದರು. ಸಹಾಯದ ನೆಪದಲ್ಲಿ ನೌಕರನ ಜೊತೆ ಹೆಚ್ಚು ಮಾತನಾಡಲಾರಂಭಿಸಿದ್ದ ಅಣ್ಣಮ್ಮ, ಸಲುಗೆ ಬೆಳೆಸಿದ್ದರು. ಲೈಂಗಿಕವಾಗಿ ಮಾತನಾಡಿ ಪ್ರಚೋದಿಸಲಾರಂಭಿಸಿದ್ದರು. ಆರೋಪಿಗಳ ಸಂಚು ಅರಿಯದ ಸರ್ಕಾರಿ ನೌಕರ ಸಹ ಸಲುಗೆಯಿಂದ ಮಾತನಾಡಲಾರಂಭಿಸಿದ್ದರು. ಅಲ್ಲಿಂದ ಆರಂಭವಾದ ಸಲುಗೆ ಮುಂದೆ ಕಾಮದವರೆಗೆ ತಿರುಗಿದೆ.
ಸರ್ಕಾರಿ ನೌಕರ ಹಾಗೂ ಆರೋಪಿ ಅಣ್ಣಮ್ಮ, ಹಲವು ಬಾರಿ ಭೇಟಿಯಾಗಿ ಖಾಸಗಿ ಕ್ಷಣಗಳನ್ನು ಕಳೆದಿದ್ದರು. ವಸತಿಗೃಹವೊಂದರಲ್ಲಿ ಉಳಿದುಕೊಂಡಿದ್ದ ಸಂದರ್ಭದಲ್ಲಿ ದೂರುದಾರರ ವಿಡಿಯೊವನ್ನು ಆರೋಪಿ ಚಿತ್ರೀಕರಿಸಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.
‘ದೂರುದಾರರಿಗೆ ವಿಡಿಯೊ ಕಳುಹಿಸಿದ್ದ ಆರೋಪಿಗಳು, ‘ನಾವು ಕೇಳಿದಷ್ಟು ಹಣ ನೀಡಬೇಕು. ಇಲ್ಲದಿದ್ದರೆ, ವಿಡಿಯೊವನ್ನು ನಿಮ್ಮ ಸಂಬಂಧಿಕರಿಗೆ ಕಳುಹಿಸುತ್ತೇವೆ’ ಎಂದು ಬೆದರಿಕೆಯೊಡ್ಡಿದ್ದರು. ಮರ್ಯಾದೆಗೆ ಅಂಜಿದ್ದ ದೂರುದಾರ, ಹಂತ ಹಂತವಾಗಿ ₹ 82 ಲಕ್ಷ ನೀಡಿದ್ದರು.’ ಇತ್ತೀಚೆಗೆ ಪುನಃ ದೂರುದಾರರಿಗೆ ಕರೆ ಮಾಡಿದ್ದ ಆರೋಪಿಗಳು ₹ 42 ಲಕ್ಷ ನೀಡುವಂತೆ ಬೇಡಿಕೆ ಇರಿಸಿದ್ದರು. ಇದರಿಂದ ಬೇಸತ್ತ ಸಂತ್ರಸ್ತ, ಠಾಣೆಗೆ ಬಂದು ದೂರು ನೀಡಿದ್ದರು’ ಎಂದು ತಿಳಿಸಿದರು. ಪ್ರಕರಣ ದಾಖಲಾಗುತ್ತಿದ್ದಂತೆ ಅಣ್ಣಮ್ಮ ಅವರನ್ನು ಬಂಧಿಸಲಾಯಿತು. ನಂತರ, ಸ್ನೇಹಾ ಹಾಗೂ ಅವರ ಪತಿ ಲೋಕೇಶ್ನನ್ನೂ ಸೆರೆ ಹಿಡಿಯಲಾಯಿತು ಎಂದರು.