ನ್ಯೂಸ್ ನಾಟೌಟ್ : ನಟ ಉಪೇಂದ್ರ ಅವರಿಗೆ ಸದ್ಯ ಬಿಗ್ ರಿಲೀಫ್ ಸಿಕ್ಕಿದೆ. ಉಪ್ಪಿ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗಳನ್ನು ರದ್ದು ಮಾಡಬೇಕು ಎಂದು ಕೋರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಚಂದನ್ ಗೌಡರ್ ಅವರ ನೇತೃತ್ವದ ನ್ಯಾಯಪೀಠದಿಂದ ಮಧ್ಯಂತರ ತಡೆಯಾಜ್ಞೆ (Stay against FIR) ನೀಡಿದೆ.
ಆಗಸ್ಟ್ 12ರಂದು ಪ್ರಜಾಕೀಯ ಪಕ್ಷಕ್ಕೆ 6 ವರ್ಷ ತುಂಬುತ್ತಿದ್ದಂತೆ ಇದರ ಸಂಭ್ರಮದಲ್ಲಿದ್ದ ಉಪ್ಪಿ ಮತ್ತು ಅವರ ಅಭಿಮಾನಿಗಳು ಭಾರಿ ಸಂತಸದಲ್ಲೇ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ ಉಪೇಂದ್ರ ಅವರು ತಮ್ಮ ಅಭಿಮಾನಿಗಳ ಜತೆ ಸಂಮಾತನಾಡಲು ಶುರು ಮಾಡಿದರು. ಹೀಗೆ ಮಾತಿಗಿಳಿದ ಉಪ್ಪಿ ʼಊರು ಅಂದ್ಮೇಲೆ ಹೊಲೆಗೇರಿ ಇರುತ್ತಲ್ಲಾ ಹಾಗೆ..ʼ ಎಂದು ಹೇಳಿದ್ದರು.
ಈ ಹೇಳಿಕೆ ಭಾರಿ ವಿವಾದಕ್ಕೆ ಗುರಿಯಾಗುವಂತೆ ಮಾಡಿತ್ತು.ಇದು ಸೋಷಿಯಲ್ ಮೀಡಿಯಾದಲ್ಲಿ ವೃರಲಾಗುತ್ತಿದ್ದಂತೆಯೇ ಜನರಿಂದ ವ್ಯಾಪಕ ಟೀಕೆಗಳು ವ್ಯಕ್ತವಾದವು. ಉಪೇಂದ್ರ ಈ ರೀತಿ ಹೇಳಿದ್ದು ಸರಿಯಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದರು. ಜತೆಗೆ ದಲಿತ ಸಂಘಟನೆಗಳು ಆಕ್ರೋಶಗೊಂಡು ಸಿಡಿದೆದ್ದವು.
ಇದರಿಂದ ಎಚ್ಚೆತ್ತುಕೊಂಡ ಉಪೇಂದ್ರ ಅವರು ಕ್ಷಮೆ ಯಾಚನೆ ಕೂಡಾ ಮಾಡಿದ್ದರು. ಆದರೆ ಸಾಮಾಜಿಕ ಕಿಚ್ಚು ನಿಂತ ಹಾಗಿಲ್ಲ. ಭಾರತೀಯ ದಂಡ ಸಂಹಿತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ 1985ರ (Atrocity act) ಅಡಿಯಲ್ಲಿ ಈಗಾಗಲೇ ಎರಡು ಎಫ್ಐಆರ್ಗಳನ್ನು ದಾಖಲಿಸಲಾಗಿತ್ತು. ಇದಾದ ಬೆನ್ನಲ್ಲೇ ಉಪೇಂದ್ರ ಅವರಿಗಾಗಿ ಪೊಲೀಸರು ಶೋಧ ಕಾರ್ಯ ಶುರು ಮಾಡಿದ್ದರು. ಅವರ ಮೊಬೈಲ್ ಆಫ್ ಆಗಿದ್ದರ ಬಗ್ಗೆಯೂ ವರದಿಯಾಗಿತ್ತು.ಇದೀಗ ಅದರ ಬೆನ್ನಿಗೇ ಉಪೇಂದ್ರ ಅವರು ಎಫ್ಆರ್ಐಗಳಿಗೆ ತಡೆಯಾಜ್ಞೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಉಪೇಂದ್ರರ ಹೇಳಿಕೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಅಟ್ರಾಸಿಟಿ ಕೇಸ್ ಕೂಡ ದಾಖಲಾಗಿತ್ತು. ತಾವು ಹೇಳಿದ ಗಾದೆ ಮಾತು ವಿವಾದಕ್ಕೆ ಗುರಿಯಾಗುತ್ತಿದ್ದಂತೆ ನಟ ಉಪೇಂದ್ರ ಅವರು ಕ್ಷಮೆ ಕೇಳುತ್ತೇನೆ ಎಂದು ಕ್ಷಮೆ ಕೇಳಿದ್ದರು.ಇದಷ್ಟೇ ಅಲ್ಲದೇ ಅವರ ವಿರುದ್ಧ ದಾಖಲಾಗಿದ್ದಂತ ಅಟ್ರಾಸಿಟಿ ಕೇಸ್ ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದರು.
ಇಂದು ಅವರ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರು, ಇದೊಂದು ಪದ ಮಾತ್ರ ಉಪಯೋಗಿಸಿದರಾ ಎಂದು ಪ್ರಶ್ನಿಸಿದರು.ಗಾದೆ ಬಳಸಿದ್ದಾರೆ ಅದಕ್ಕೇಕೆ ಇಷ್ಟೊಂದು ಎಫ್ಐಆರ್ ಎಂಬುದಾಗಿ ಕೇಳಿದರು. ಅಲ್ಲದೇ ಗಾದೆ ಮಾತು ಉಲ್ಲೇಖಿಸಿ ಮಾತನಾಡಿದ್ದಕ್ಕೆ ಎಸ್ಸಿ, ಎಸ್ಟಿ ತಡೆ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಬಳಿಕ ನಟ ಉಪೇಂದ್ರ ವಿರುದ್ಧ ದಾಖಲಾಗಿದ್ದಂತ ಎಫ್ಐಆರ್ ಗೆ ತಡೆಯನ್ನು ನೀಡಿದ್ದಾರೆ. ನಟ ಉಪೇಂದ್ರ ಪರವಾಗಿ ಹಿರಿಯ ವಕೀಲ ಉದಯ್ ಹೊಳ್ಳ ಅವರು ವಾದ ಮಂಡಿಸಿದ್ದಾರೆ.ನಟ ಉಪೇಂದ್ರ ಅವರಿಗೆ ಈ ಮೂಲಕ ಬಿಗ್ ರಿಲೀಫ್ ಸಿಕ್ಕಂತಾಗಿದೆ.