ಏನಿದು ಮಠದ ಭಕ್ತರ ಆಕ್ರೋಶ?
ನ್ಯೂಸ್ ನಾಟೌಟ್: ಸ್ವಾಮೀಜಿಯ ಮುಂದೆ ಸಮಾಜದ ಮುಖಂಡರ ದೂರುಗಳ ಸುರಿಮಳೆ, ಮೌನವಾಗಿ ಕುಳಿತಿರುವ ಸ್ವಾಮೀಜಿ ಮುಂದೆ ಮುಖಂಡರ ಆಕ್ರೋಶ. ಪವಿತ್ರ ಮಠದಲ್ಲಿ ನೋಡಬಾರದ್ದನ್ನ ನೋಡಿರುವ ಸಮಾಜದ ಮುಖಂಡರು ಸ್ವಾಮೀಜಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಹೌದು, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿರುವ ಪ್ರಭಾವಿ ವಾಲ್ಮೀಕಿ ನಾಯಕ ಸಮಾಜದ ವಾಲ್ಮೀಕಿ ಪೀಠದಲ್ಲಿ ಈ ಘಟನೆ ನಡೆದಿದೆ. ಮಠದಲ್ಲಿ ವ್ಯಕ್ತಿಯೊಬ್ಬ ತೊಡೆಯ ಮೇಲೆ ಮಹಿಳೆಯರನ್ನ ಕೂರಿಸಿಕೊಂಡು ಚಕ್ಕಂದವಾಡುತ್ತಿದ್ದಾನೆ. ಇದನ್ನ ನಾವು ಕಣ್ಣಾರೆ ಕಂಡಿದ್ದೇವೆ ಎಂದು ಅಲ್ಲಿನ ಸಮಾಜ ಮುಖಂಡರು ದೂರಿದ್ದಾರೆ.
ಅಲ್ಲದೇ, ನೀವು ನಮ್ಮ ಸಮಾಜವನ್ನ ಕಡಗಣಿಸುತ್ತಿದ್ದೀರಿ ಎಂದು ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಯುವ ಘಟಕ ಪದಾಧಿಕಾರಿಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಸ್ವಾಮೀಜಿಯ ನಡವಳಿಕೆಯಿಂದ ಬೇಸತ್ತಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ಒಟ್ಟಿಗೆ ವಾಲ್ಮೀಕಿ ಪೀಠಕ್ಕೆ ಬಂದಿದ್ದು, ಸ್ವಾಮೀಜಿಯನ್ನ ಹೊರಗೆ ಕೂರಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಠದಲ್ಲಿ ವ್ಯಕ್ತಿಯೊಬ್ಬ ಮಹಿಳೆಯರ ಜೊತೆ ಇರುವುದನ್ನ ನಾವು ಕಣ್ಣಾರೆ ನೋಡಿದ್ದೇವೆ. ಮಠದಲ್ಲಿ ಇಂತಹ ಅಸಹ್ಯ ಕೃತ್ಯಗಳಿಗೆ ಯಾಕೆ ಅವಕಾಶ ಕೊಟ್ಟಿದ್ದೀರಿ ? ಕೊಪ್ಪಳದಲ್ಲಿರುವ ಮಠದ ಬೆಳ್ಳಿಯನ್ನ ಯಾರನ್ನ ಕೇಳಿ ಮಾರಾಟ ಮಾಡಿದ್ದೀರಿ ?, ನಿಮ್ಮ ಹಿಂಬಾಲಕರನ್ನಾಗಿ ಬೇರೆ ಸಮುದಾಯದವರನ್ನ ಯಾಕೆ ಇಟ್ಟುಕೊಂಡಿದ್ದೀರಿ? ಎಂದು ಸ್ವಾಮೀಜಿಯ ನಡೆಯ ವಿರುದ್ದವೇ ಭಕ್ತರು ಮತ್ತು ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.