ನ್ಯೂಸ್ ನಾಟೌಟ್ : ಕಳೆದ 11 ವರ್ಷಗಳ ಹಿಂದೆ ಅತ್ಯಾಚಾರ ನಡೆದು ಕೊಲೆಯಾದ ಸೌಜನ್ಯ ಪ್ರಕರಣಕ್ಕೆ ಇನ್ನು ನ್ಯಾಯ ಸಿಕ್ಕಿಲ್ಲ. ಹೀಗಾಗಿ ಸರ್ಕಾರ ಮರುತನಿಖೆ ಕೈಗೊಂಡು ನೈಜವಾದ ಆರೋಪಿಗಳನ್ನು ಪತ್ತೆ ಮಾಡಿ ಅವರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿ ಪುತ್ತಿಲ ಪರಿವಾರದ ವತಿಯಿಂದ ಬೃಹತ್ ಪ್ರತಿಭಟನೆ ಇಂದು ಹಮ್ಮಿಕೊಳ್ಳಲಾಗಿದೆ. ಇದೀಗ ಪ್ರತಿಭಟನೆ ನಡೆಯುತ್ತಿದ್ದು, ಭಾರಿ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಿದ್ದಾರೆ.
ಪುತ್ತೂರಿನಲ್ಲಿ ‘ನಮ್ಮ ನಡೆ ನ್ಯಾಯದ ಕಡೆ’ ಬೃಹತ್ ಕಾಲ್ನಡಿಗೆ ಜಾಥ ನಡೆಯುತ್ತಿದ್ದು,ಹಲವು ಗಣ್ಯರು ಪಾಲ್ಗೊಂಡಿದ್ದಾರೆ.ಸೌಜನ್ಯಳಿಗೆ ನ್ಯಾಯ ಸಿಗಬೇಕೆಂದು ಒತ್ತಾಯಗಳು ಕೇಳಿ ಬರುತ್ತಿವೆ.ವಿಶೇಷವೆಂದರೆ ನೂರಾರು ಮಂದಿ ಮಹಿಳೆಯರು ಸೇರಿದಂತೆ ಯುವತಿಯರು ಕೂಡ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಇದೀಗ ನಡೆಯುತ್ತಿರುವ ಕಾಲ್ನಡಿಗೆ ಜಾಥಾವು ದರ್ಬೆ ವೃತ್ತದಿಂದ ಆರಂಭಗೊಂಡಿದೆ.ಬಳಿಕ ಪುತ್ತೂರು ಬಸ್ ನಿಲ್ದಾಣದವರೆಗೆ ತೆರಳಿ ಅಲ್ಲಿ ರಸ್ತೆ ತಡೆ ಮತ್ತು ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.’ಬೇಕೆ ಬೇಕು ನ್ಯಾಯ ಬೇಕು,ನಮ್ಮ ನಡೆ ನ್ಯಾಯದ ಕಡೆ’ ಎನ್ನುತ್ತಾ ಪುತ್ತಿಲ ಪರಿವಾರ ಹೆಜ್ಜೆಯನ್ನಿರಿಸಿತು.
ಸೌಜನ್ಯ ಹಾಗೂ ಆಕೆ ಕುಟುಂಬಸ್ಥರಿಗೆ ನ್ಯಾಯ ಸಿಗುವ ಉದ್ದೇಶದಿಂದ ಪೂರ್ವಭಾವಿ ಸಭೆ ನಡೆಸಿತ್ತು.ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಮಾರ್ತಾ , ನಗರ ಅಧ್ಯಕ್ಷರಾದ ಅನಿಲ್ ತೆಂಕಿಲ, ಪ್ರಧಾನ ಕಾರ್ಯದರ್ಶಿ ಉಮೇಶ್ ವೀರಮಂಗಲ, ಪ್ರಮುಖರಾದ ಸುನೀಲ್ ಬೋರ್ಕರ್, ರವಿ ಕುಮಾರ್ ಕೆದಂಬಾಡಿ ಮಠ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಕೃಷ್ಣಪ್ರಸಾದ್ ಶೆಟ್ಟಿ, ಚಂದ್ರಹಾಸ್ ಈಶ್ವರಮಂಗಲ, ಪ್ರೇಮ್ ರಾಜ್ ಆರ್ಲಪದವು ಸೇರಿದಂತೆ ಹಲವು ಪ್ರಮುಖರು ಸೇರಿ ಈ ನಿರ್ಧಾರ ಕೈಗೊಂಡಿದ್ದರು.
ಸೌಜನ್ಯಳಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿ ಅಲ್ಲಲ್ಲಿ ಪ್ರತಿಭಟನೆಗಳು ಹೆಚ್ಚುತ್ತಿವೆ.ಕೊಲೆ ಹಂತಕರು ಯಾರು ಎನ್ನುವ ಪ್ರಶ್ನೆ ಬುಗಿಲೆದ್ದಿದ್ದು, ಸರಿಯಾದ ಕ್ರಮದಲ್ಲಿ ತನಿಖೆ ನಡೆಸಿ ಕಾನೂನು ರೀತಿಯಲ್ಲಿ ಅವರನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು ಎನ್ನುವ ಒತ್ತಾಯಗಳು ಕೇಳಿ ಬರುತ್ತಿವೆ.ಕೇವಲ ದ.ಕ ಜಿಲ್ಲೆ ಮಾತ್ರವಲ್ಲ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಈ ಬಗ್ಗೆ ಪ್ರತಿಭಟನೆಗಳು ಹೆಚ್ಚುತ್ತಿವೆ.