ನ್ಯೂಸ್ ನಾಟೌಟ್: ಸುಳ್ಯದ ಅರಂಬೂರು ಬಳಿಯ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿರುವ ವ್ಯಕ್ತಿಯ ಶವವನ್ನು ಗುರುತಿಸಲಾಗಿದೆ. ಮೃತ ವ್ಯಕ್ತಿಯನ್ನು ಮಡಿಕೇರಿ ತಾಲೂಕು ಎಂ ಚೆಂಬು ಗ್ರಾಮದ ಬಾಲಕೃಷ್ಣ ಯಾನೆ ಬಡ್ಡ ಬಾಲ (65 ವರ್ಷ) ಎಂದು ಗುರುತಿಸಲಾಗಿದೆ.
ಮಿನುಂಗೂರು ಮನೆಯ ಬಾಲಕೃಷ್ಣ ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಆಗಸ್ಟ್ 8ರಂದು ಚೆಂಬುವಿನಲ್ಲಿರುವ ತನ್ನ ಮನೆಯಿಂದ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸುವುದಕ್ಕೆ ಅರಂತೋಡಿಗೆ ತೆರಳಿದ್ದರು. ಹಾಗೆ ಬಂದವರು ಅರಂತೋಡಿನಿಂದ ವ್ಯಾನ್ ಹತ್ತಿ ಸುಳ್ಯಕ್ಕೆ ಹೋಗಿದ್ದಾರೆ ಎನ್ನಲಾಗಿತ್ತು. ಆದರೆ ಅವರು ಮರಳಿ ವಾಪಸ್ ಮನೆಗೆ ಬಂದಿರಲಿಲ್ಲ. ಎಲ್ಲಿ ಹೋದರು ಏನು ಆದರು ಅನ್ನುವ ಬಗ್ಗೆ ಮಾಹಿತಿ ಇರಲಿಲ್ಲ. ಈ ಕುರಿತಂತೆ ಮನೆಯವರು ತೀವ್ರ ಆತಂಕಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆ ನಡೆದು ಆರು ದಿನಗಳ ನಂತರ ಪಾಲಡ್ಕ ಬಳಿ ಪಯಸ್ವಿನಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಈ ಶವ ಬಾಲಕೃಷ್ಣ ಅವರದ್ದು ಆಗಿರಬಹುದು ಎಂದು ಶಂಕಿಸಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಮನೆಯವರು ಪರಿಶೀಲನೆ ನಡೆಸಿ ಬಾಲಕೃಷ್ಣ ಅವರದ್ದು ಎಂದು ಖಚಿತಪಡಿಸಿದ್ದಾರೆ. ಬಾಲಕೃಷ್ಣ ಅವರು ಪುತ್ರ, ಪುತ್ರಿ ಹಾಗೂ ಪತ್ನಿ ಕುಟುಂಬಸ್ಥರನ್ನು ಅಗಲಿದ್ದಾರೆ.
ಬಾಲಕೃಷ್ಣ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೂ ದಾಖಲಾಗಿದ್ದರು. ಗುಣಮುಖರಾಗಿ ಮರಳಿ ಬಂದ ನಂತರ ತನ್ನ ಆರೋಗ್ಯದ ಬಗ್ಗೆ ಹೆಚ್ಚು ಚಿಂತಿತರಾಗಿದ್ದರು ಎಂದು ತಿಳಿದು ಬಂದಿದೆ.