ನ್ಯೂಸ್ ನಾಟೌಟ್: ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ಫೆಬ್ರವರಿ 20ರಂದು ಇಬ್ಬರನ್ನು ಬಲಿ ಪಡೆದಿದೆ ಎಂದು ಅರಣ್ಯ ಇಲಾಖೆ ಗುರುತಿಸಿ ಹಿಡಿದಿರುವ
ಕಾಡಾನೆ ಕೊಡಗಿನ ಮತ್ತಿಗೋಡು ಆನೆ ಶಿಬಿರದಲ್ಲಿ ಮೃತಪಟ್ಟಿದೆ ಎಂದು ವರದಿಯಾಗಿದೆ. ಕಡಬದಲ್ಲಿ ಸೆರೆ ಹಿಡಿಯಲಾಗಿದ್ದ ಕಾಡಾನೆಯನ್ನು ಕೊಡಗಿನ ಮತ್ತಿಗೋಡು ಆನೆ ಶಿಬಿರಕ್ಕೆ ಸೇರಿಸಲಾಗಿತ್ತು. ಆದರೆ ಆ.11ರ ಶುಕ್ರವಾರ ಈ ಆನೆ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಅದರ ಮರಣೋತ್ತರ ಪರೀಕ್ಷೆ ನಡೆಸುವ ಕಾರ್ಯ ಮಾಡಲಾಯಿತು.
ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಸಮೀಪದ ನೈಲದಲ್ಲಿ ಫೆಬ್ರವರಿ 20ರಂದು ಹಾಲು ಸೊಸೈಟಿ ಉದ್ಯೋಗಿಯಾಗಿದ್ದ ರಂಜಿತಾ ರೆಂಜಿಲಾಡಿ ಬೆಳಗ್ಗೆ ಸೊಸೈಟಿಗೆ ತೆರಳುವ ವೇಳೆ ಮನೆ ಸಮೀಪ ಆಕೆಯ ಮೇಲೆ ಆನೆ ದಾಳಿ ನಡೆದಿತ್ತು. ಆಕೆ ಬೊಬ್ಬೆ ಹೊಡೆದ ವೇಳೆ ಅಲ್ಲಿಗೆ ರಕ್ಷಿಸಲು ಬಂದ ರಮೇಶ್ ಎಂಬವರ ಮೇಲೂ ಆನೆ ದಾಳಿ ನಡೆಸಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡ ರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು.
ಯುವತಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆಯಿಂದ ಘಟನೆಯಿಂದ ಆಕ್ರೋಶಗೊಂಡಿದ್ದ ಸಾರ್ವಜನಿಕರು ಕಾಡಾನೆ ಸೆರೆ ಹಿಡಿದು ಸ್ಥಳಾಂತರಿಸುವಂತೆ ಒತ್ತಾಯಿಸಿದ್ದರು. ಬಳಿಕದ ಬೆಳವಣಿಗೆಯಲ್ಲಿ ಘಟನಾ ಸ್ಥಳಕ್ಕೆ ಅಂದಿನ ಜಿಲ್ಲಾಧಿಕಾರಿ ರವಿಕುಮಾರ್ ಹಾಗೂ ಡಿಸಿಎಫ್ ದಿನೇಶ್ ಕುಮಾರ್ ಭೇಟಿ ನೀಡಿ ಕಾಡಾನೆ ಸೆರೆ ಹಿಡಿಯುವ ಭರವಸೆ ನೀಡಿದ್ದರು.
ಮರುದಿನವೇ ಕಾಡಾನೆ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಲಾಗಿತ್ತು. ದುಬಾರೆ ಮತ್ತು ತಿತಿಮತಿಯಿಂದ ಐದು ಸಾಕಾನೆಗಳನ್ನು ತರಿಸಿ ಕಾರ್ಯಾಚರಣೆ ಆರಂಭಿಸಿ, ಮೂರನೇ ದಿನ ಕಡಬ ತಾಲೂಕಿನ ಕೊಂಬಾರು ಸಮೀಪದ ಮಂಡೆಕರ ಎಂಬಲ್ಲಿ ನರ ಹಂತಕ ಕಾಡಾನೆಯನ್ನು ಸೆರೆಹಿಡಿಯಲಾಗಿತ್ತು. ಬಳಿಕ ಅದನ್ನು ಕೊಡಗಿನ ಆನೆ ಶಿಬಿರಕ್ಕೆ ಕೊಂಡೊಯ್ಯಲಾಗಿತ್ತು. ಇದೀಗ ಅಲ್ಲಿನ ಈ ಆನೆ ನಿಧನ ಹೊಂದಿದೆ ಎಂದು ವರದಿಯಾಗಿದೆ.
ಹೆಚ್ಚಿನ ತರಬೇತಿಗಾಗಿ ಜು.20 ರಂದು ಕ್ರಾಲ್ ನಿಂದ ಬಂಧಮುಕ್ತಗೊಳಿಸಿ ಮಾವುತ ಶಿವು, ಕವಾಡಿ ಚಂದ್ರರವರ ಉಸ್ತುವಾರಿಯಲ್ಲಿ ತರಬೇತಿ ನೀಡಲಾಗುತ್ತಿತ್ತು. ಆನೆ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದ ಸುಬ್ರಹ್ಮಣ್ಯ ಆ.11 ರ ಶುಕ್ರವಾರದಂದು ಮಲಗಿದಲ್ಲೇ ಅಸ್ಪಸ್ಥಗೊಂಡಿದೆ ಎಂದು ಹೇಳಲಾಗುತ್ತಿದೆ. ಆನೆಗೆ ನಾಗರಹೊಳೆ ಪಶುವೈದ್ಯ ಡಾ.ರಮೇಶ್ ಚಿಕಿತ್ಸೆ ನೀಡಿದರಾದರೂ ಮೇಲೇಳಿಸುವ ಪ್ರಯತ್ನ ಸಫಲವಾಗದೆ ಕ್ರೇನ್ ತರಿಸಿ ಎದ್ದು ನಿಲ್ಲಿಸುವ ಯತ್ನವೂ ವಿಫಲವಾಗಿ ಅಂದೇ ಸಂಜೆ ವೇಳೆಗೆ ಮೃತಪಟ್ಟಿದೆ ಎಂದು ಹುಲಿಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.
ಶನಿವಾರದಂದು ಹುಣಸೂರು ವನ್ಯಜೀವಿ ಉಪ ವಿಭಾಗದ ಪಶುವೈದ್ಯಾಧಿಕಾರಿ ಡಾ.ಚೆಟ್ಟಿಯಪ್ಪ, ದುಬಾರೆ ಶಿಬಿರದ ಪಶುವೈದ್ಯ ಡಾ.ಮದನ್ ಗೋಪಾಲ್, ಮೈಸೂರು ಲೀಲಾಪೆಟ್ ಆಸ್ಪತ್ರೆಯ ಡಾ.ಎಚ್.ರಮೇಶ್ರವರು ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ದಯಾನಂದ, ಆರ್.ಎಫ್.ಓ. ದಿಲೀಪ್ಕುಮಾರ್ ಸಮ್ಮುಖದಲ್ಲಿ ಸುಬ್ರಹ್ಮಣ್ಯ ಆನೆಯ ಶವ ಪರೀಕ್ಷೆ ನಡೆಸಿದರು.
ಆನೆಯು ಬಹು ಅಂಗಾಂಗ ವೈಫಲ್ಯ ಕಾಯಿಲೆ(ಆರ್ಥಿಟಿಸ್)ಯಿಂದ ಸೆಪ್ಟಿಸೀಮಿಯಾ (ಇನ್ಫೆಕ್ಷನ್)ನಿಂದ ಬಳಲಿ ಮೃತಪಟ್ಟಿರುವುದಾಗಿ ಪಶುವೈದ್ಯರ ತಂಡ ಮಾಹಿತಿ ನೀಡಿದೆ. ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಆನೆಯ ಶವವನ್ನು ಹೂತಿರುವುದಾಗಿ ಡಿಸಿಎಫ್ ಮಾಹಿತಿ ನೀಡಿದರು.