ನ್ಯೂಸ್ ನಾಟೌಟ್: ಕೋಟ್ಯಂತರ ಭಕ್ತರ ಪವಿತ್ರ ಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸನ್ನಿಧಿಯ ಪವಿತ್ರ ತೀರ್ಥ ಸ್ನಾನ ಘಟ್ಟ ಕುಮಾರಧಾರ ನದಿಯಲ್ಲಿ ಮೊಸಳೆಗಳು ಪ್ರತ್ಯಕ್ಷವಾಗಿವೆ. ಇದರಿಂದ ಜನರಲ್ಲಿ ಆತಂಕ ಮೂಡಿದೆ. ಕಳೆದ ಐದು ದಿನಗಳಿಂದ ಮೊಸಳೆಗಳು ಬೀಡು ಬಿಟ್ಟಿವೆ ಎಂದು ನ್ಯೂಸ್ ನಾಟೌಟ್ ಗೆ ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಸುಬ್ರಹ್ಮಣ್ಯ ಸ್ನಾನ ಘಟ್ಟದ ಬ್ರಿಡ್ಜ್ ಬಳಿ ಹಲವು ದಿನಗಳಿಂದ ಮೊಸಳೆ ಪ್ರತ್ಯಕ್ಷವಾಗಿದೆ. ಸದ್ಯ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ಭಕ್ತರು ನೀರಿಗೆ ಇಳಿಯದಂತೆ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ. ಆದರೆ ಕೆಲವು ಭಕ್ತರು ನೀರಿಗೆ ಇಳಿಯಲು ಬಿಡುತ್ತಿಲ್ಲವೆಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಕುಮಾರಧಾರ ನದಿ ತಟದಲ್ಲಿ ಭಕ್ತರಿಗೆ ಮೋಟಾರ್ ಯಂತ್ರದ ಮೂಲಕ ಡ್ರಮ್ ಗಳಿಗೆ ನೀರು ತುಂಬಿಸಿ ಸ್ನಾನದ ವ್ಯೆವಸ್ಥೆ ಮಾಡಲಾಗಿದೆ. ಆದರೆ ಕೆಲವು ಭಕ್ತರು ಸ್ನಾನಕ್ಕೆ ನದಿಯ ನೀರಿಗೇ ಇಳಿಯುವುದಾಗಿ ಹಠ ಮಾಡುತ್ತಿದ್ದಾರೆ. ಇವರನ್ನು ನಿಯಂತ್ರಿಸುವುದು ರಕ್ಷಣಾ ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ. ಕಳೆದ ಎರಡು ದಿನಗಳಿಂದ ನೀರಿನ ಪ್ರಮಾಣ ಹೆಚ್ಚಿದೆ. ಅಲ್ಲದೆ ಮೊಸಳೆಗಳು ಕೂಡ ಇರುವುದರಿಂದ ಯಾವುದೇ ಕ್ಷಣದಲ್ಲಿ ಅಪಾಯ ಎದುರಾಗಬಹುದು.
ಹೀಗಾಗಿ ನೀರಿನ ಪ್ರಮಾಣ ಕಡಿಮೆ ಆದ ಬಳಿಕ ಸ್ನಾನಕ್ಕೆ ನದಿಗೆ ಇಳಿಯುವುದಕ್ಕೆ ಭಕ್ತರಿಗೆ ಅವಕಾಶ ನೀಡಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ