ನ್ಯೂಸ್ ನಾಟೌಟ್: ಸೌಜನ್ಯ ಪ್ರಕರಣದಲ್ಲಿ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ನೀಡಿರುವ ಹೇಳಿಕೆ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಈ ನಡುವೆ ನಾನು ಹಾಗೆ ಹೇಳಿಕೆಯನ್ನೇ ನೀಡಿಲ್ಲ. ನನ್ನ ಹೇಳಿಕೆಯನ್ನು ಕೆಲವು ಮಾಧ್ಯಮಗಳು ತಿರುಚಿವೆ ಎಂದು ತೀವ್ರ ಅಸಮಾಧಾನವನ್ನು ಬಂಗೇರ ವ್ಯಕ್ತಪಡಿಸಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಬಂಗೇರ ಅವರು, “ಸೌಜನ್ಯ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಿದ್ದೇ ನಾನು, ವಿಧಾನಸಭೆಯಲ್ಲಿ ಈ ಬಗ್ಗೆ ಒತ್ತಾಯ ಮಾಡಿರುವುದೇ ನಾನು, 6 ತಿಂಗಳು ಸಿಬಿಐ ಚೆನ್ನಾಗಿ ತನಿಖೆ ಮಾಡಿದೆ, ಆದರೆ 6 ತಿಂಗಳ ಬಳಿಕ ಸಿಬಿಐ ಕವಚಿ ಬಿದ್ದಿದ್ದು, ತನಿಖೆ ತಪ್ಪು ದಾರಿಯಲ್ಲಿ ಹೋಗಿದೆ. ನನ್ನ ಪ್ರಕಾರ ಈ ಪ್ರಕರಣವನ್ನು ತನಿಖೆ ಮಾಡಿ ಆರೋಪಿಗಳ ಪತ್ತೆ ಹಚ್ಚಲು ಸಾಧ್ಯ, ಸಂದರ್ಭ ಬಂದಾಗ ಸೌಜನ್ಯ ವಿಚಾರದಲ್ಲಿ ಹೇಳಬೇಕಾದ ವಿಚಾರವನ್ನು ಹೇಳುತ್ತೇನೆ.
ಆದರೆ ಸತ್ಯ ಹೇಳಿದರೆ ನನ್ನನ್ನು ಕೊಲ್ಲುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ನಾನು ಆ ರೀತಿ ಮಾತೇ ಆಡಿಲ್ಲ ಎಂದ ಅವರು ಜೀವಂತವಾಗಿ ಯಾರಿಗೂ ನನ್ನನ್ನು ಕೊಲ್ಲಲು ಸಾಧ್ಯವಿಲ್ಲ, ಜಿಲ್ಲೆಯಲ್ಲಿ,ತಾಲೂಕಿನಲ್ಲಿ ಎಷ್ಟೇ ದೊಡ್ಡವರಿಗೂ ಒಬ್ಬನನ್ನು ಕೊಲ್ಲಲು ಸಾಧ್ಯವಿಲ್ಲ, ಬೆಳ್ತಂಗಡಿಯಲ್ಲಿ ನಡೆದ ಸಭೆಯಲ್ಲಿ ದೇವರು ನನ್ನನ್ನು ರಕ್ಷಣೆ ಮಾಡುತ್ತಾರೆ ಎಂದಿದ್ದೆ, ಆದರೆ ನನ್ನ ಮಾತನ್ನು ಕೆಲವು ಮಾಧ್ಯಮಗಳು ತಿರುಚಿವೆ ಎಂದರು.
ಬೆಳ್ತಂಗಡಿಯಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದ ನೇರ ಪ್ರಸಾರವನ್ನು ‘ನ್ಯೂಸ್ ನಾಟೌಟ್’ ಯೂಟ್ಯೂಬ್ ಚಾನೆಲ್ ಪ್ರಸಾರ ಮಾಡಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ವಸಂತ ಬಂಗೇರ ಮಾತನಾಡಿ ಸೌಜನ್ಯ ಪ್ರಕರಣದ ತನಿಖೆಗೆ ಒತ್ತಾಯಿಸಿದ್ದರು. ಮಾತ್ರವಲ್ಲ ಸಮಯ ಬಂದಾಗ ಸತ್ಯ ಹೇಳುತ್ತೇನೆ, ನನ್ನನ್ನು ಕೊಂದರೆ ಹೋಯಿತು, ನನ್ನನ್ನು ಅಷ್ಟು ಸುಲಭವಾಗಿ ಯಾರಿಗೂ ಏನೂ ಮಾಡೋಕೆ ಆಗಲ್ಲ. ಏಕೆಂದರೆ ನಾನು ದೊಡ್ಡ ದೇವರ ಭಕ್ತ ಎಂದು ಹೇಳಿಕೊಂಡಿದ್ದರು. ಈ ಸುದ್ದಿಯು ರಾಜ್ಯಾದ್ಯಂತ ಭಾರಿ ಸುದ್ದಿಯಾಗಿತ್ತು. ನ್ಯೂಸ್ ನಾಟೌಟ್ ಲೈವ್ ನಲ್ಲಿ ಬಂಗೇರ ಮಾತನಾಡಿದ ವಿಡಿಯೋ ತುಣುಕು ರಾಜ್ಯದ ಎಲ್ಲ ಮಾಧ್ಯಮಗಳಲ್ಲೂ ಪ್ರಸಾರವಾಗಿತ್ತು.