ನ್ಯೂಸ್ ನಾಟೌಟ್: ಅಂಗನವಾಡಿ ಕೇಂದ್ರಗಳಿಗೆ ಇತ್ತೀಚಿನ ದಿನಗಳಲ್ಲಿ ಸರಿಯಾಗಿ ಹಣ ಬಿಡುಗಡೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲೊಬ್ಬ ಮಹಿಳೆ ಮಾಂಗಲ್ಯ ಅಡವಿಟ್ಟು ಬಾಡಿಗೆ ಕಟ್ಟಿರುವುದು ಈಗ ಭಾರಿ ಸುದ್ದಿಯಾಗಿದೆ.
ಅಂಗನವಾಡಿ ಕೇಂದ್ರಗಳಿಗೆ ಅನುದಾನ ಬಿಡುಗಡೆಯಾಗದ ಕಾರಣ ಬೆಳಗಾವಿಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮಾಂಗಲ್ಯ ಅಡವಿಟ್ಟಿದ್ದಾರೆ. ಬೆಳಗಾವಿಯ ಮೆಣಸಿನಗಲ್ಲಿಯ ಅಂಗನವಾಡಿ ಕಾರ್ಯಕರ್ತೆ ಮಾಂಗಲ್ಯ ಅಡವಿಟ್ಟ ಎಂದು ತಿಳಿದು ಬಂದಿದೆ. ಸದ್ಯ ಬಾಡಿಗೆ ಕಟ್ಟಲು ಅಡವಿಟ್ಟಿದ್ದ ಮಾಂಗಲ್ಯವನ್ನು ಅಧಿಕಾರಿಗಳು ಹಣ ಪಾವತಿಸಿ ಬಿಡಿಸಿಕೊಟ್ಟಿದ್ದಾರೆ. ದರಬಾರಗಲ್ಲಿಯ ಅಂಗನವಾಡಿಗೆ 20 ತಿಂಗಳಿಂದ ಹಣ ಬಿಡುಗಡೆಯಾಗಿಲ್ಲ. ಕಾರ್ಯಕರ್ತೆ ಈಗಲೂ ಸಾಲ ಮಾಡಿ ಬಾಡಿಗೆ ಕಟ್ಟುತ್ತಿದ್ದಾರೆ.
ರಾಜ್ಯದಲ್ಲಿ ಒಟ್ಟು 66,361 ಅಂಗನವಾಡಿ ಕೇಂದ್ರಗಳಿದ್ದು, 19,802 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. ಸ್ವಂತ ಕಟ್ಟಡ ಇಲ್ಲದ ಅಂಗನವಾಡಿಗಳಿಗೆ ಗ್ರಾಮ ಪಂಚಾಯಿತಿ ಇಲ್ಲವೆ ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆದು ಒದಗಿಸಲಾಗಿದೆ.
‘ನಗರದ ಅಂಗನವಾಡಿಗೆ ತಿಂಗಳಿಗೆ ₹4,000 ಹಾಗೂ ಗ್ರಾಮೀಣ ಅಂಗನವಾಡಿಗೆ ₹1,000 ಬಾಡಿಗೆ ಹಣ ನೀಡುತ್ತದೆ. ಈ ಮೊತ್ತವನ್ನೂ ಭರಿಸಲಾಗದ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು