ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಸಂತಸದ ಸುದ್ದಿಯೊಂದು ಹೊರ ಬಿದ್ದಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಧಾರಣೆ 3 ತಿಂಗಳಿನಿಂದ ಏರುಗತಿಯಲ್ಲಿ ಸಾಗುತ್ತಿದೆ. ಇದೀಗ 500ರ ಗಡಿ ಸಮೀಪಿಸುತ್ತಿದೆ. ಉತ್ತಮ ದರ ಸಿಗುತ್ತಿರುವ ಕಾರಣ ಬೆಳೆಗಾರರ ಮುಖದಲ್ಲಿ ಹರ್ಷ ವ್ಯಕ್ತವಾಗಿದೆ. ಪ್ರಸ್ತುತ ಮಂಗಳೂರು ಚಾಲಿ ಹೊಸ ಅಡಿಕೆ ದರ ಕೆ.ಜಿ.ಗೆ ₹447 ಇದ್ದು, ಹಳೆ ಅಡಿಕೆ ಧಾರಣೆ ಕೆ.ಜಿ.ಗೆ ₹485ರಿಂದ ₹487 ಇದೆ.
3 ತಿಂಗಳಿನಿಂದ ಅಡಿಕೆ ಧಾರಣೆಯಲ್ಲಿ ಏರಿಕೆಯಾಗುತ್ತಲೇ ಇದೆ. ಕಳೆದ ಬಾರಿ ಕೆ.ಜಿ.ಗೆ ₹370 ಇದ್ದ ದರ ಪ್ರಸ್ತುತ ₹487ಇದ್ದು, ₹80 ಏರಿಕೆಯಾಗಿದೆ. ಅಡಿಕೆಗೆ ಭಾರಿ ಬೇಡಿಕೆಯಿದ್ದು, ದರ ಹೆಚ್ಚಿರುವ ಕಾರಣ ಅಡಿಕೆ ವರ್ತಕರು, ಕ್ಯಾಂಪ್ಕೊ, ಎಪಿಎಂಸಿಗಳಲ್ಲಿ ಉತ್ತಮ ವಹಿವಾಟು ನಡೆಯುತ್ತಿದೆ. ಇನ್ನುಳಿದಂತೆ ಪಟೋರ ಅಡಿಕೆ ಕೆ.ಜಿ.ಗೆ ₹400 ದರ ಇದ್ದು, ಕರಿಗೋಟು ದರ ಕೆ.ಜಿ.ಗೆ ₹340, ಚೆಪ್ಪುಗೋಟು ₹325–₹330 ಇದೆ.
ಕ್ಯಾಂಪ್ಕೊದಲ್ಲಿ ಪ್ರಸ್ತುತ ಹಳೆ ಅಡಿಕೆ ಕ್ವಿಂಟಲ್ ಗೆ ₹43,500 ರಿಂದ ₹47,000 ದರ ಇದ್ದು, ಹೊಸ ಅಡಿಕೆಗೆ ₹30 ಸಾವಿರದಿಂದ 45 ಸಾವಿರ ಇದೆ. ಕೋಕಂಗೆ ಕ್ವಿಂಟಲ್ ಗೆ ₹23 ಸಾವಿರದಿಂದ 31 ಸಾವಿರ ಇದೆ. ಕಳೆದ ವರ್ಷ ಮಂಗಳೂರು ಎಪಿಎಂಸಿಯಲ್ಲಿ ಒಟ್ಟು 1 ಲಕ್ಷದ 76 ಸಾವಿರದ 7 ಕ್ವಿಂಟಲ್ ಅಡಿಕೆ ವಹಿವಾಟು ನಡೆದಿದೆ. ಈ ವರ್ಷ ಏಪ್ರಿಲ್ನಲ್ಲಿ 15,678 ಕ್ವಿಂ., ಮೇನಲ್ಲಿ 22,131 ಕ್ವಿಂ., ಜೂನ್ನಲ್ಲಿ 19,009 ಕ್ವಿಂ. ಹಾಗೂ ಜುಲೈನಲ್ಲಿ 13,958 ಕ್ವಿಂಟಲ್ ವಹಿವಾಟು ನಡೆದಿದೆ.
ಅಡಿಕೆಗೆ ದರ ಏರಿಕೆಯಾದರೂ ಅದರ ಲಾಭ ಅಡಿಕೆ ಸುಲಿಯುವವರಿಗೆ ವರ್ಗಾವಣೆಯಾಗಿಲ್ಲ. ಅವರ ದಿನಗೂಲಿಯಲ್ಲಿ ಏರಿಕೆಯಾಗಿಲ್ಲ. ಸುಲಿದ ಪ್ರತಿ ಕೆ.ಜಿ. ಅಡಿಕೆಗೆ ₹13 ನೀಡಲಾಗುತ್ತದೆ. ಕೆಲವು ಕಡೆ ಹೆಚ್ಚೆಂದರೆ ₹15–₹16 ನೀಡಲಾಗುತ್ತಿದೆ. ಅಡಿಕೆ ಸುಲಿಯುವ ಕೆಲಸ ಲಾಭ ತರುವಂಥದ್ದಾದರೂ ಸುಲಭವಲ್ಲ. ಅಡಿಕೆ ದರ ಏರಿಕೆಯಾಗುತ್ತಿರುವುದು ಖುಷಿ ತಂದಿದೆ. ಇನ್ನೂ ಏರಿಕೆಯಾಗುವ ನಿರೀಕ್ಷೆಯಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಧಾರಣೆ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದೆ ಎಂದು ಕೃಷಿಕ ಸಂತೋಷ ವ್ಯಕ್ತಪಡಿಸಿದ್ದಾರೆ.